HomeKarnatakaಕನ್ನಡ ರಾಜ್ಯೋತ್ಸವದ ಸಂಭ್ರಮದ ವೇಳೆ ಬೆಳಗಾವಿಯಲ್ಲಿ MES ಪುಂಡಾಟ: ಕರಾಳ ದಿನಾಚರಣೆ ಎಂದು ಕಪ್ಪು ಬಾವುಟ...

ಕನ್ನಡ ರಾಜ್ಯೋತ್ಸವದ ಸಂಭ್ರಮದ ವೇಳೆ ಬೆಳಗಾವಿಯಲ್ಲಿ MES ಪುಂಡಾಟ: ಕರಾಳ ದಿನಾಚರಣೆ ಎಂದು ಕಪ್ಪು ಬಾವುಟ ಹಿಡಿದು ಮೆರವಣಿಗೆ

ಬೆಳಗಾವಿ: 71ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಮಧ್ಯರಾತ್ರಿಯಿಂದಲೇ ಬೆಳಗಾವಿಯಲ್ಲಿ ಕನ್ನಡದ ಕಲರವದೊಂದಿಗೆ ರಾಜ್ಯೋತ್ಸವ ಆಚರಿಸಲಾಗಿದೆ. ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಮಹಾರಾಷ್ಟ್ರ ಏಕೀಕರಣ ಸಮಿತಿ-ಎಂಇಎಸ್ ಮುಖಂಡರು ಮತ್ತೆ ಕ್ಯಾತೆ ತೆಗೆದು ಪುಂಡಾಟ ನಡೆಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಳಗಾವಿ ಜಿಲ್ಲೆಯಿರುವಾಗ ಎಂಇಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕರಾಳ ದಿನಾಚರಣೆ ನಡೆಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಎಂಇಎಸ್ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರೂ ಎಂಇಎಸ್ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದಾರೆ.

ನಗರದ ಧರ್ಮವೀರ ಸಂಭಾಜಿ ಉದ್ಯಾನವನದಿಂದ ಆರಂಭಗೊಂಡ ಎಂಇಎಸ್‌ನ ಕರಾಳ ದಿನದ ಮೆರವಣಿಗೆ ಬಸವೇಶ್ವರ ವೃತ್ತದ ಸಮೀಪದ ಮರಾಠ ಮಂದಿರದವರೆಗೆ ಸಾಗುವ ಕಾರ್ಯಕ್ರಮ ರೂಪಿಸಲಾಗಿದೆ. ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದು, ಬೆಳಗಾವಿ ಸೇರಿದಂತೆ ಗಡಿ ಭಾಗದ 865 ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಘೋಷಣೆಗಳನ್ನು ಕೂಗಿದ್ದಾರೆ.

ಪ್ರತಿ ವರ್ಷದ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಎಂಇಎಸ್ ಕರಾಳ ದಿನಾಚರಣೆ ನಡೆಸುತ್ತಾ ಬಂದಿದೆ. ಈ ಬಾರಿಯೂ ಅದೇ ಪರಂಪರೆಯನ್ನು ಮುಂದುವರಿಸಿರುವ ಸಮಿತಿ, ರಾಜ್ಯೋತ್ಸವದ ಸಂಭ್ರಮದ ದಿನದಂದೇ ಕಪ್ಪು ಬಟ್ಟೆ ಹಾಗೂ ಕಪ್ಪು ಬಾವುಟಗಳೊಂದಿಗೆ ತನ್ನ ಪ್ರತಿಭಟನೆ ಪ್ರದರ್ಶಿಸಿದೆ. ಇದು ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ.

ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ವಿವಿಧ ರಾಜಕೀಯ ನಾಯಕರನ್ನು ಎಂಇಎಸ್ ಆಹ್ವಾನಿಸಿತ್ತು. ಅದರಲ್ಲೂ ಉದ್ಧವ್ ಠಾಕ್ರೆ ಬಣದ ನಾಯಕರು ಸೇರಿದಂತೆ ಹಲವು ಮುಖಂಡರು ಬೆಳಗಾವಿಗೆ ಆಗಮಿಸುವ ನಿರೀಕ್ಷೆಯಿತ್ತು. ಆದರೆ, ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕೆ ವಹಿಸಿರುವ ಜಿಲ್ಲಾಡಳಿತ, ಮಹಾರಾಷ್ಟ್ರದ ನಾಯಕರ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಈ ಮೂಲಕ ಹೊರರಾಜ್ಯದ ನಾಯಕರ ಭಾಗವಹಿಸುವಿಕೆಗೆ ಬ್ರೇಕ್ ಹಾಕಲಾಗಿದೆ.

ಇನ್ನೊಂದೆಡೆ, ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸುತ್ತಿದ್ದು, ವಿವಿಧ ಕನ್ನಡಪರ ಸಂಘಟನೆಗಳು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸುತ್ತಿವೆ. ಇಂತಹ ಸಂಭ್ರಮದ ವಾತಾವರಣದ ನಡುವೆಯೇ ಎಂಇಎಸ್‌ನ ಕರಾಳ ದಿನಾಚರಣೆ ನಡೆದಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ನಗರದ ಪ್ರಮುಖ ವೃತ್ತಗಳು, ಮೆರವಣಿಗೆಯ ಮಾರ್ಗಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದು, ಮೆರವಣಿಗೆಯ ಚಲನವಲನಗಳ ಮೇಲೂ ನಿಗಾ ವಹಿಸಿದ್ದಾರೆ.

ಬೆಳಗಾವಿ ನಗರದಲ್ಲಿ 3000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಬೆಳಗಾವಿ ಪೊಲೀಸ್ ಕಮೀಷನರ್ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಇಬ್ಬರು ಡಿಸಿಪಿ, ಎಸಿಪಿ 6, ಪಿಐ 68, ಪಿಎಸ್ಐ ಮತ್ತು ಎಎಸ್ಐ 304, 1800 ಪೊಲೀಸ್ ಸಿಬ್ಬಂದಿ, 400 ಹೋಮ್ ಗಾರ್ಡ್ ಭದ್ರತೆಗೆ ನಿಯೋಜಿಸಲಾಗಿದೆ.

ಬೆಳಗಾವಿಯಲ್ಲಿ ಒಂದೆಡೆ ಕನ್ನಡ ರಾಜ್ಯೋತ್ಸವದ ವೈಭವ ಕಳೆಕಟ್ಟಿದ್ದರೆ ಮತ್ತೊಂದೆಡೆ ಎಂಇಎಸ್‌ನ ಕರಾಳ ದಿನಾಚರಣೆ ಭಾಷಾ ವಿವಾದ ಶುರುವಾಗಿದ್ದು, ಗಡಿನಾಡು ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular