ನಿನ್ನೆ ( ಏಪ್ರಿಲ್ 10 ) ಗುವಾಹಟಿಯ ಬರ್ಸಾಪರ ಕ್ರಿಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳ ಗೆಲುವನ್ನು ದಾಖಲಿಸಿತು.
ಬೇಗನೆ ತನ್ನ 6 ವಿಕೆಟ್ ಕಳೆದುಕೊಂಡ ಆರ್ಸಿಬಿ ಪಟಿದಾರ್ ಅರ್ಧಶತಕ, ಶೆಫರ್ಡ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ವೆಂಕಟೇಶ್ ಐಯ್ಯರ್ ಕೊಡುಗೆಯಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್ಗಳ ಸವಾಲಿನ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅರ್ಧಶತಕಗಳ ನೆರವಿನಿಂದ 18 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು.
ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ನಡೆಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 78 ರನ್ ಚಚ್ಚಿದ ವೈಭವ್ ಸೂರ್ಯವಂಶಿ ತಾನು ಎಂತಹ ಬೌಲರ್ಗಳಿಗಾದರೂ ದೊಡ್ಡ ಹೊಡೆತಗಳನ್ನು ಬಾರಿಸಬಲ್ಲೆ ಎಂದು ಮತ್ತೊಮ್ಮೆ ಸಾಬೀತು ಮಾಡಿದರು.
ಹೀಗೆ ನಿನ್ನೆ ಆರ್ಸಿಬಿ ಸೋಲಿಗೆ ಕಾರಣನಾದ ವೈಭವ್ ಸೂರ್ಯವಂಶಿ ಹಾಗೂ ಆರ್ಸಿಬಿ ಆಟಗಾರನ ನಡುವೆ ಕ್ರೀಡಾಸ್ಪೂರ್ತಿ ಸಾರುವ ಘಟನೆಯೊಂದು ನಡೆದಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಪಂದ್ಯದ ಆರಂಭದಲ್ಲಿ ವೈಭವ್ ಸೂರ್ಯವಂಶಿ ಶೂ ಲೇಸ್ ಬಿಚ್ಚಿಕೊಂಡಿದ್ದು, ಅದನ್ನು ಸರಿಪಡಿಸುವಂತೆ ಕೇಳಲು ತನ್ನ ಸಹ ಆಟಗಾರ ಜೈಸ್ವಾಲ್ ಬಳಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವೈಭವ್ ಬಳಿ ಬಂದ ಆರ್ಸಿಬಿ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ವೆಂಕಟೇಶ್ ಐಯ್ಯರ್ ವೈಭವ್ಗೆ ಶೂ ಲೇಸ್ ಕಟ್ಟಿ ಸಹಾಯ ಮಾಡಿದರು.
ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ವೆಂಕಟೇಶ್ ಐಯ್ಯರ್ ಕ್ರೀಡಾಸ್ಪೂರ್ತಿಯನ್ನು ಹಾಡಿಹೊಗಳಿದ್ದಾರೆ.

