ಇಂದು ( ಮೇ 22 ) ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 67ನೇ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಈ ಎರಡೂ ತಂಡಗಳೂ ಸಹ ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಸದ್ಯ ಉಭಯ ತಂಡಗಳ ಚಿತ್ತ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆದು ಕ್ವಾಲಿಫಯರ್ 1 ಆಡುವ ಸವಲತ್ತು ಪಡೆಯುವತ್ತ ಇದೆ. ಹೌದು, ಟಾಪ್ 2 ಸ್ಥಾನಗಳನ್ನು ಪಡೆಯುವ ತಂಡಗಳಿಗೆ ಫೈನಲ್ ಪ್ರವೇಶಿಸಲು ಎರಡು ಪಂದ್ಯಗಳನ್ನು ಆಡುವ ಅವಕಾಶವಿರಲಿದ್ದು, ಸದ್ಯ ಸನ್ ರೈಸರ್ಸ್ ಆರ್‌ಸಿಬಿಯಿಂದ ಈ ಅವಕಾಶವನ್ನು ವಶಪಡಿಸಿಕೊಳ್ಳಲಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 13 ಪಂದ್ಯಗಳ್ನನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ಪಂದ್ಯಗಳಲ್ಲಿ ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿದ್ದು, 13 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆದ್ದು 16 ಅಂಕಗಳನ್ನು ಹೊಂದಿರುವ ಸನ್ ರೈಸರ್ಸ್ ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ. ಆದರೆ ಇಂದು ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ಗೆದ್ದರೆ ಎರಡೂ ತಂಡಗಳ ಅಂಕ 18 ಆಗಲಿದ್ದು, ನೆಟ್ ರನ್‌ರೇಟ್ ಆಧಾರದ ಮೇಲೆ ಅಂಕಪಟ್ಟಿಯ ಸ್ಥಾನ ಹಾಗೂ ಯಾವ ತಂಡ ಕ್ವಾಲಿಫಯರ್ ಒಂದರಲ್ಲಿ ಆಡಲಿದೆ ಎಂಬುದು ಬಹಿರಂಗವಾಗಲಿದೆ.
ಚೆನ್ನೈ ವಿರುದ್ಧ ಬೃಹತ್ ಅಂತರದ ಗೆಲುವು ಕಂಡ ಗುಜರಾತ್ ಟೈಟನ್ಸ್ ಒಳ್ಳೆಯ ನೆಟ್ ರನ್‌ರೇಟ್ ಜತೆಗೆ ಎರಡನೇ ಸ್ಥಾನ ಭದ್ರಪಡಿಸಿಕೊಂಡಿದ್ದು, ಇಂದು ಹೈದರಾಬಾದ್ ಗೆದ್ದರೆ ಮೊದಲ ಸ್ಥಾನಕ್ಕೇರುವ ಸಾಧ್ಯತೆ ಇದೆ. ಇದೀಗ ಅದೇ ರೀತಿ ಹೈದರಾಬಾದ್ ಒಳ್ಳೆಯ ನೆಟ್ ರನ್ ರೇಟ್ ಸಂಪಾದಿಸಿ ಎರಡನೆ ಸ್ಥಾನಕ್ಕೇರಿ ಆರ್‌ಸಿಬಿಯನ್ನು ಮೂರನೇ ಸ್ಥಾನಕ್ಕೆ ತಳ್ಳಬೇಕೆಂದರೆ ಈ ಅಂತರದಲ್ಲೇ ಗೆಲ್ಲಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿ ಸನ್ ರೈಸರ್ಸ್ ಹೈದರಾಬಾದ್ ಚೇಸ್ ಮಾಡಿದರೆ ಈ ಕೆಳಕಂಡಂತೆ ಚೇಸ್ ಮಾಡಲೇಬೇಕು.
*ಒಂದು ವೇಳೆ ಆರ್‌ಸಿಬಿ 121 ರನ್ ಟಾರ್ಗೆಟ್ ನೀಡಿದರೆ ಹೈದರಾಬಾದ್ ಅದನ್ನು 11.1 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲ್ಲಲೇಬೇಕು. ಹೀಗೆ ಮಾಡಿದರೆ ಹೈದರಾಬಾದ್ ನೆಟ್ ರನ್ ರೇಟ್ 0.657 ಆಗಲಿದ್ದು, ಆರ್‌ಸಿಬಿ ನೆಟ್ ರನ್ ರೇಟ್ 0.655 ಆಗಲಿದೆ.
* ಆರ್‌ಸಿಬಿ 141 ರನ್ ಟಾರ್ಗೆಟ್ ನೀಡಿದರೆ ಹೈದರಾಬಾದ್ ಅದನ್ನು 11.1 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲ್ಲಲೇಬೇಕು. ಹೀಗೆ ಮಾಡಿದರೆ ಹೈದರಾಬಾದ್ ನೆಟ್ ರನ್ ರೇಟ್ 0.659 ಆಗಲಿದ್ದು, ಆರ್‌ಸಿಬಿ ನೆಟ್ ರನ್ ರೇಟ್ 0.657 ಆಗಲಿದೆ.
* ಆರ್‌ಸಿಬಿ 161 ರನ್ ಟಾರ್ಗೆಟ್ ನೀಡಿದರೆ ಹೈದರಾಬಾದ್ ಅದನ್ನು 11.1 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲ್ಲಲೇಬೇಕು. ಹೀಗೆ ಮಾಡಿದರೆ ಹೈದರಾಬಾದ್ ನೆಟ್ ರನ್ ರೇಟ್ 0.6604 ಆಗಲಿದ್ದು, ಆರ್‌ಸಿಬಿ ನೆಟ್ ರನ್ ರೇಟ್ 0.6602 ಆಗಲಿದೆ.
* ಆರ್‌ಸಿಬಿ 181 ರನ್ ಟಾರ್ಗೆಟ್ ನೀಡಿದರೆ ಹೈದರಾಬಾದ್ ಅದನ್ನು 11 ಓವರ್‌ಗಳಲ್ಲಿ ಚೇಸ್ ಮಾಡಿ ಗೆಲ್ಲಲೇಬೇಕು. ಹೀಗೆ ಮಾಡಿದರೆ ಹೈದರಾಬಾದ್ ನೆಟ್ ರನ್ ರೇಟ್ 0.668 ಆಗಲಿದ್ದು, ಆರ್‌ಸಿಬಿ ನೆಟ್ ರನ್ ರೇಟ್ 0.657 ಆಗಲಿದೆ.
ಸದ್ಯ ಸನ್ ರೈಸರ್ಸ್ ಹೈದರಾಬಾದ್ ತಂಡದ ಈ ಚೇಸಿಂಗ್ ಲೆಕ್ಕಾಚಾರ ನೋಡಿ ನೆಟ್ಟಿಗರು ಇದು ಆಗಿದಿರುವ ಕೆಲಸ ಬಿಡಿ ಎಂದು ನಗತೊಡಗಿದ್ದಾರೆ.

