ಮಲಯಾಳಂ ಚಿತ್ರರಂಗದ ಕಲೆಕ್ಷನ್ ಸುಲ್ತಾನ್, ಕಂಪ್ಲೀಟ್ ಆಕ್ಟರ್ ಮೋಹನ್‌ಲಾಲ್ ಅವರ ಬಾಕ್ಸ್ ಆಫೀಸ್ ತಾಕತ್ತು ಮತ್ತೊಮ್ಮೆ ಸಾಬೀತಾಗಿದೆ. ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಅವರ ಮೋಸ್ಟ್ ಅವೈಟೆಡ್ ಕ್ರೈಮ್ ಇನ್ವೆಸ್ಟಿಗೇಷನ್ ಥ್ರಿಲ್ಲರ್ ‘ದೃಶ್ಯಂ 3’ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರದ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನವೇ ಐತಿಹಾಸಿಕ ಕಲೆಕ್ಷನ್ ಮಾಡಿದೆ. ಹಿಂದಿ ಹೊರತುಪಡಿಸಿ ಉಳಿದೆಲ್ಲ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಗಳಿಕೆಯಲ್ಲಿ ಮಾತ್ರ ಹೊಸ ದಾಖಲೆ ಬರೆದಿದೆ.
ಖ್ಯಾತ ನಿರ್ದೇಶಕ ಜೀತು ಜೋಸೆಫ್ ನಿರ್ದೇಶನದ ಈ ಸಿನಿಮಾ ಮೋಹನ್‌ಲಾಲ್ ಅವರ ಸಿನಿ ಬದುಕಿನಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಮಲಯಾಳಂ ಚಿತ್ರರಂಗದಲ್ಲಿ (ಮೊಲಿವುಡ್) ನಂಬರ್ ಒನ್ ಸ್ಟಾರ್ ತಾವೇ ಎಂಬುದನ್ನು ಮೋಹನ್‌ಲಾಲ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿಶೇಷವೆಂದರೆ ಬಾಕ್ಸ್ ಆಫೀಸ್‌ನಲ್ಲಿ ಈ ಬಾರಿ ‘ಮೋಹನ್‌ಲಾಲ್ ವರ್ಸಸ್ ಮೋಹನ್‌ಲಾಲ್’ ಎಂಬಂತಹ ಪೈಪೋಟಿ ಏರ್ಪಟ್ಟಿತ್ತು. ಅಂದರೆ ಅವರದ್ದೇ ಹಿಂದಿನ ಸಿನಿಮಾಗಳ ದಾಖಲೆಯನ್ನು ಈ ಹೊಸ ಚಿತ್ರ ಧೂಳೀಪಟ ಮಾಡಿದೆ.
ಟಿಕೆಟ್ ಬುಕ್ಕಿಂಗ್ ಆಪ್ ‘ಬುಕ್‌ಮೈಶೋ’ನಲ್ಲಿ ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 5 ಲಕ್ಷದ 87 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗುವ ಮೂಲಕ ‘ದೃಶ್ಯಂ 3’ ಇತಿಹಾಸ ಸೃಷ್ಟಿಸಿದೆ. ಈ ಹಿಂದೆ ಮೋಹನ್‌ಲಾಲ್ ನಟನೆಯ ‘ತುಡರುಮ್’ ಸಿನಿಮಾ ಮೊದಲ ದಿನ 4 ಲಕ್ಷದ 19 ಸಾವಿರ ಹಾಗೂ ‘ಎಲ್2: ಎಂಪುರಾನ್’ ಸಿನಿಮಾ 3 ಲಕ್ಷದ 81 ಸಾವಿರ ಟಿಕೆಟ್ ಮಾರಾಟ ಕಂಡಿದ್ದವು. ಇದೀಗ ಈ ಎರಡೂ ಚಿತ್ರಗಳ ದಾಖಲೆಯನ್ನು ಮುರಿದಿರುವ ದೃಶ್ಯಂ ಸರಣಿಯ ಮೂರನೇ ಭಾಗ, ಬುಕ್‌ಮೈಶೋ ಇತಿಹಾಸದಲ್ಲೇ ಅತ್ಯಧಿಕ ಓಪನಿಂಗ್ ಪಡೆದ ಮೊದಲ ಮಲಯಾಳಂ ಸಿನಿಮಾ ಎಂಬ ಕೀರ್ತಿಗೆ ಭಾಜನವಾಗಿದೆ.
ಆಂಟೋನಿ ಪೆರುಂಬಾವೂರ್ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಅನಿಲ್ ಜಾನ್ಸನ್ ಸಂಗೀತ ನೀಡಿದ್ದಾರೆ. ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿರುವ ಹಳೆಯ ತಾರಾಗಣದ ನಟರಾದ ಮೀನಾ, ಸಿದ್ದಿಕ್, ಆಶಾ ಶರತ್, ಮುರಳಿ ಗೋಪಿ, ಅನ್ಸಿಬಾ ಹಸನ್ ಮತ್ತು ಎಸ್ತರ್ ಅನಿಲ್ ಮತ್ತೊಮ್ಮೆ ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

