ನಿನ್ನೆ ( ಮೇ 23 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 68ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಸತತ ಆರು ಸೋಲುಗಳ ಬಳಿಕ ಕೊನೆಗೂ ಗೆಲುವಿನ ನಗೆ ಬೀರಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ ಜೋಶ್ ಇಂಗ್ಲಿಸ್ ಅರ್ಧಶತಕ ಹಾಗೂ ಆಯುಷ್ ಬದೋನಿ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 197 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪ್ರಭ್‌ಸಿಮ್ರಾನ್ ಅರ್ಧಶತಕ ಹಾಗೂ ಶ್ರೇಯಸ್ ಐಯ್ಯರ್ ಅರ್ಧಶತಕದ ನೆರವಿನಿಂದ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಬಾರಿಸಿತು.
ಈ ಗೆಲುವಿ ಮೂಲಕ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 15 ಅಂಕಗಳನ್ನು ಸಂಪಾದಿಸುವ ಮೂಲಕ ಪ್ಲೇಆಫ್ ಕನಸು ಕಾಣುತ್ತಿದ್ದು, ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದರೆ ಪಂಜಾಬ್ ಪ್ಲೇಆಫ್‌ಗೆ ಲಗ್ಗೆ ಇಡಲಿದೆ.
ಇನ್ನು ಈ ಪಂದ್ಯಕ್ಕೂ ಮುನ್ನ ಎಲಿಮಿನೇಟ್ ಆಗಿದ್ದ ಲಕ್ನೋ ಸೂಪರ್ ಜೈಂಟ್ಸ್ ಈ ಪಂದ್ಯವನ್ನು ಗೆದ್ದು ಪಂಜಾಬ್ ಕಿಂಗ್ಸ್ ತಂಡದ ಪ್ಲೇಆಫ್ ಆಸೆಯನ್ನೇ ನಶಿಸಿಹಾಕಿಬಿಡಬಹುದಿತ್ತು. ಆದರೆ ಆ ಧೈರ್ಯ ಲಕ್ನೋ ತಂಡದಲ್ಲಿ ಕಾಣಲೇ ಇಲ್ಲ. ಈ ಪಂದ್ಯ ಬಿಡಿ ಇಡೀ ಟೂರ್ನಿಯಲ್ಲಿ ಒಮ್ಮೆಯೂ ಲಕ್ನೋ ಸಮರ್ಥ ತಂಡ ಎಂದು ಒಮ್ಮೆಯೂ ಕಾಣಸಿಗಲಿಲ್ಲ.
ಲಕ್ನೋ ತಂಡದ ಈ ದುಸ್ಥಿತಿಗೆ ಪ್ರಮುಖ ಕಾರಣ ನಾಯಕ ರಿಷಭ್ ಪಂತ್ ಎಂದರೆ ತಪ್ಪಾಗಲಾರದು. ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಜಾಣ್ಮೆಯ ನಾಯಕತ್ವ ನಿಭಾಯಿಸಿದ ಇತಿಹಾಸವಿಲ್ಲದ ಪಂತ್‌ಗೆ ಫ್ರಾಂಚೈಸಿಯ ಮಾಲೀಕರು ಯಾವ ಆಧಾರದ ಮೇಲೆ ನಾಯಕತ್ವ ಕೊಡುತ್ತಾರೋ ಗೊತ್ತಿಲ್ಲ. ಪ್ರತಿ ಬಾರಿಯೂ ಸೋಲು ಕಟ್ಟಿಟ್ಟ ಬುತ್ತಿ.
ಈ ಬಾರಿಯೂ ಸಹ ಅಂತಹದ್ದೇ ಮತ್ತೊಂದು ಫಲಿತಾಂಶವನ್ನು ಕೊಟ್ಟ ನಾಯಕ ಪಂತ್ ತಾನೊಬ್ಬ ಅಸಮರ್ಥ ಕೆಟ್ಟ ನಾಯಕ ಎಂಬುದನ್ನು ಸಾರಿ ಹೇಳಿದ್ದಾರೆ.
ಇನ್ನು ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ನಮ್ಮದು ಒಳ್ಳೆಯ ತಂಡ ಎಂದು ಹೇಳಿಕೊಳ್ಳಲು ಹೊಲಸು ‘ಎಫ್’ ಪದ ಬಳಸಿದ್ದ ಪಂತ್ ನಿನ್ನೆ ಪಂದ್ಯ ಸೋತ ಕೂಡಲೇ ಮೈದಾನದಲ್ಲಿ ಕಣ್ಣೀರು ಹಾಕುತ್ತಾ ಹೊರನಡೆದರು.
ಮಾಲೀಕರು ದೊಡ್ಡ ಹೆಸರಿದೆ ಎಂಬ ಶೋಕಿಗೆ ನಾಯಕತ್ವ ಬಾರದ ಆಟಗಾರರ ಹೆಗಲಿಗೆ ಜವಾಬ್ದಾರಿ ಹಾಕಿ ಮುಖಭಂಗ ಅನುಭವಿಸುವುದನ್ನು ಬಿಟ್ಟು ಸಮರ್ಥ ಆಟಗಾರರಿಗೆ ಅವಕಾಶ ನೀಡಬೇಕಿದೆ.

