ಬಳ್ಳಾರಿ: ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಬಡವರಿಗೆ ನಿವೇಶನ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯೆಯ ಪತಿ ಹಾಗೂ ಪ್ರಭಾವಿ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಾನಗರ ಪಾಲಿಕೆ ಸದಸ್ಯೆ ಉಮಾದೇವಿ ಅವರ ಪತಿ ಶಿವರಾಜ್ ಸೇರಿದಂತೆ ಒಟ್ಟು 13 ಜನರ ವಿರುದ್ಧ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕಂದಾಯ ಇಲಾಖೆ ನೀಡಿರುವ ಈ ದೂರಿನಲ್ಲಿ ಎ-1 ಆರೋಪಿಯಾಗಿ ಹೊನ್ನೂರಪ್ಪ ಹಾಗೂ ಎ-6 ಆರೋಪಿಯಾಗಿ ಕಾಂಗ್ರೆಸ್ ಮುಖಂಡ ಶಿವರಾಜ್ ಹೆಸರನ್ನು ಉಲ್ಲೇಖಿಸಲಾಗಿದೆ. ಒಟ್ಟು 13 ಜನರ ವಿರುದ್ಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ನಂಬಿಸಿ ಮೋಸ ಮಾಡಿರುವುದು ಮತ್ತು ವಂಚನೆ ಎಸಗಿರುವ ಗಂಭೀರ ಆರೋಪಗಳು ಇವರ ಮೇಲಿವೆ.
ಪೊಲೀಸರು ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಸರ್ಕಾರಿ ಭೂಮಿ ಒತ್ತುವರಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಡೀ ಬಳ್ಳಾರಿ ಜಿಲ್ಲೆಯಲ್ಲಿ ಈ ಹಗರಣ ಭಾರಿ ಸಂಚಲನ ಸೃಷ್ಟಿಸಿದೆ.

