ಇದೇ 28ರಿಂದ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2026 ಆರಂಭಗೊಳ್ಳಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಇನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಆವೃತ್ತಿಗಳ ಹಾಗೆ ಅನ್‌ಬಾಕ್ಸ್ ಈವೆಂಟ್ ಆಯೋಜಿಸದ ಆರ್‌ಸಿಬಿ ಕಳೆದ ಬಾರಿ ಕಾಲ್ತುಳಿತದಿಂದ ಮೃತಪಟ್ಟ ಘಟನೆಯಿಂದ ಎಚ್ಚೆತ್ತುಕೊಂಡು ಅಭಿಮಾನಿಗಳ ಹಿತಾದೃಷ್ಟಿಯಿಂದ ಸರಿಯಾದ ಯೋಜನೆಗಳನ್ನು ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಇಂದು ( ಮಾರ್ಚ್ 24 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯನ್ನುದ್ದೇಶಿಸಿ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಸುದ್ದಿಗೋಷ್ಟಿ ನಡೆಸಿದ್ದು, ಕಾಲ್ತುಳಿತದಲ್ಲಿ ಮೃತಪಟ್ಟವರ ಕುರಿತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮಹತ್ವದ ನಿರ್ಧಾರಗಳನ್ನು ತಿಳಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಸೀಟುಗಳನ್ನು ಖಾಲಿ ಬಿಡುವ ಮೂಲಕ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ ಆರ್‌ಸಿಬಿ ಪಂದ್ಯ ಆರಂಭಕ್ಕೂ ಮುನ್ನ ನಡೆಯುವ ಅಭ್ಯಾಸದ ವೇಳೆ ಆರ್‌ಸಿಬಿಯ ಎಲ್ಲ ಆಟಗಾರರು 11 ಸಂಖ್ಯೆ ಇರುವ ಜೆರ್ಸಿಯನ್ನು ಧರಿಸಲಿದ್ದಾರೆ ಮತ್ತು ಪಂದ್ಯದ ವೇಳೆ ಕೈಗೆ ಕಪ್ಪು ಪಟ್ಟಿ ಧರಿಸುವ ಮೂಲಕ ಆಡಲಿದ್ದಾರೆ ಎಂದು ತಿಳಿಸಿತು.

