ನಿನ್ನೆ ( ಮೇ 22 ) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 55 ರನ್‌ಗಳ ಅಮೋಘ ಗೆಲುವು ದಾಖಲಿಸಿತು.
ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೆಯ ಪಂದ್ಯವಾಗಿದ್ದರಿಂದ ಈ ಪಂದ್ಯದ ಫಲಿತಾಂಶ ಪ್ಲೇಆಫ್ ಸುತ್ತಿನ ಪಂದ್ಯಗಳ ನಿರ್ಧಾರ ಮಾಡುತ್ತಿತ್ತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 256 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.
ಇನ್ನು ಈ ಪಂದ್ಯದಲ್ಲಿ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನೇ ಮುಂದುವರಿಸಿದೆ. ಸನ್ ರೈಸರ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 166 ರನ್ ಗಳಿಸಿದ್ರೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಸಿಗುವುದು ಪಕ್ಕಾ ಆಗಿತ್ತು. ಆರ್‌ಸಿಬಿ 200 ರನ್ ಗಳಿಸಿ ಸೋತರೂ ಸಹ ನೆಟ್ ರನ್ ರೇಟ್ ಕಾರಣಕ್ಕೆ ಅಗ್ರಸ್ಥಾನದಲ್ಲಿದೆ.
ಗುಜರಾತ್ ಟೈಟನ್ಸ್ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದು, ಸನ್ ರೈಸರ್ಸ್ ಹೈದರಾಬಾದ್ ಅರ್‌ಸಿಬಿಯನ್ನು 166 ರನ್‌ಗೆ ಕಟ್ಟಿಹಾಕಲು ಸಾಧ್ಯವಾಗದ ಕಾರಣ ಮೂರನೇ ಸ್ಥಾನಕ್ಕೆ ಫಿಕ್ಸ್ ಆಗಿದೆ.
ಹೀಗಾಗಿ ಸದ್ಯ ಟಾಪ್ 3 ಸ್ಥಾನಗಳು ನಿಶ್ಚಿತವಾಗಿದ್ದು, ನಾಲ್ಕನೇ ಸ್ಥಾನಕ್ಕೆ ರಾಜಸ್ಥಾನ್ ಬರಲಿದೆಯಾ ಅಥವಾ ಯಾವ ತಂಡ ಬರಲಿದೆ ಎಂಬುದು ಉಳಿದ ಪಂದ್ಯ ನಿರ್ಧರಿಸಲಿದೆ.
ಈ ಮೂಲಕ ಪ್ಲೇಆಫ್ ಸುತ್ತಿನ ಪಂದ್ಯಗಳ ಘೋಷಣೆಯಾಗಿದೆ. ಅವುಗಳ ಮಾಹಿತಿ ಮುಂದಿದೆ..
ಮೊದಲ ಕ್ವಾಲಿಫಯರ್ ಪಂದ್ಯ ಮೇ 26ರಂದು ಧರಂಶಾಲಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟನ್ಸ್ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೀದಾ ಫೈನಲ್ ತಲುಪಲಿದ್ದು, ಸೋಲುವ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ಜತೆ ಮೇ 29ರಂದು ನಡೆಯಲಿರುವ ಕ್ವಾಲಿಫಯರ್ 2 ಆಡಲಿದೆ.
ಎಲಿಮಿನೇಟರ್ ಪಂದ್ಯ ಮೇ 27ರಂದು ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಸನ್ ರೈಸರ್ಸ್ ಹಾಗೂ ನಾಲ್ಕನೇ ಸ್ಥಾನ ಪಡೆಯಲಿರುವ ತಂಡ ಸೆಣಸಾಟ ನಡೆಸಲಿವೆ.

