ಸದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.
ಇನ್ನು ಈ ಪಂದ್ಯಕ್ಕೆ ಉಭಯ ತಂಡಗಳಲ್ಲೂ ಬದಲಾವಣೆಗಳು ಜರುಗಿದ್ದು, ಮುಂಬೈ ಇಂಡಿಯನ್ಸ್ ದೀಪಕ್ ಚಹರ್ ಹಾಗೂ ಘಜನ್ಫರ್ ಅವರನ್ನು ಹೊರಗಿಟ್ಟು ಮಯಾಂಕ್ ಮಾರ್ಕಂಡೆ ಹಾಗೂ ಮಿಚೆಲ್ ಸ್ಯಾಂಟ್ನರ್‌ರನ್ನು ಆಡುವ ಬಳಗಕ್ಕೆ ಕರೆತಂದಿದೆ.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೋಶ್ ಹೇಜಲ್‌ವುಡ್ ಹಾಗೂ ಅಭಿನಂದನ್ ಸಿಂಗ್ ಅವರನ್ನು ಹೊರಗಿಟ್ಟು ಜೇಕಬ್ ಡಫಿ ಹಾಗೂ ಸುಯಶ್ ಶರ್ಮಾರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಕಳೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಮೂಲಕ ಈ ಬಾರಿಯ ಟೂರ್ನಿಯ ಮೊದಲ ಪಂದ್ಯವನ್ನಾಡಿದ್ದ ಜೋಶ್ ಹೇಜಲ್‌ವುಡ್ ಈ ಪಂದ್ಯಕ್ಕೆ ಅಲಭ್ಯರಾಗಿರುವುದು ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಬೇಸರ ತಂದಿದ್ದರೂ ಬದಲಿ ಆಟಗಾರನಾಗಿ ಡಫಿ ಬಂದಿರುವುದು ಸಮಾಧಾನ ತಂದಿದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೇ ದುಬಾರಿಯಾದ ಅಭಿನಂದನ್ ಸಿಂಗ್ ಅವರನ್ನು ತಂಡದಿಂದ ಹೊರಹಾಕಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ಸ್ವತಃ ಆರ್‌ಸಿಬಿ ಅಭಿಮಾನಿಗಳೇ ಅಭಿನಂದನ್ ಸಿಂಗ್‌ರನ್ನು ತಂಡದಿಂದ ಹೊರಹಾಕಿ ಎಂದು ಬೇಡಿಕೆ ಇಟ್ಟಿದ್ದರು. ಅದರಂತೆ ಇದೀಗ ಅಭಿನಂದನ್ ಸಿಂಗ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿಲ್ಲ.

