ವಿಜಯಪುರ: ಜೀವಾವಧಿ ಶಿಕ್ಷೆಗೆ ಗುರಿಯಾಗಿ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೈದಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ಆಜಾನ್ ಮುಜಾವರ ಬಂಧಿತ ವ್ಯಕ್ತಿಯಾಗಿದ್ದಾನೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆಜಾನ್ ಮುಜಾವರ 2005ರ ಮಾರ್ಚ್ 25ರಂದು 10 ದಿನ ಪೆರೋಲ್ ಪಡೆದು ರಜೆಯ ಮೇಲೆ ವಿಜಯಪುರ ಕೇಂದ್ರ ಕಾರಾಗೃಹದಿಂದ ಮಹಾರಾಷ್ಟ್ರದ ಸ್ವಗ್ರಾಮ ವಾಗೋಳಿಗೆ ಹೋಗಿದ್ದ. ಆದರೆ, ಪೆರೋಲ್ ಅವಧಿ ಮುಗಿದ ಬಳಿಕ ಕಾರಾಗೃಹಕ್ಕೆ ವಾಪಸ್ ಆಗಿರಲಿಲ್ಲ,
ಮಹಾರಾಷ್ಟ್ರದ ಕಾಮತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ವಿಜಯಪುರ ಕಾರಾಗೃಹದಿಂದ ಪೆರೋಲ್ ಪಡೆದು ನಾಪತ್ತೆಯಾಗಿದ್ದ ಆಜಾನ್ ಪತ್ತೆಗಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರ ನಿರ್ದೇಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
2026ರ ಏಪ್ರಿಲ್ 11ರಂದು ಮಹಾರಾಷ್ಟ್ರದ ಈಚಲಕರಂಜಿ ಪಟ್ಟಣದಲ್ಲಿ ಆರೋಪಿ ಆಜಾನ್ ಮುಜಾವರನನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ವಿಜಯಪುರ ಸೈಬರ್ ಕ್ರೈಂ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಕೈದಿಯನ್ನು ಬಂಧಿಸಿದ್ದಾರೆ. ತಂಡದ ಕಾರ್ಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.

