ಶಿವಮೊಗ್ಗ: ಜನರ ಅನುಕೂಲಕ್ಕಾಗಿ ಯಶಸ್ವಿ ಬೆಂಗಳೂರು-ಶಿವಮೊಗ್ಗ ಇಂಡಿಗೋ ವಿಮಾನ ಸೇವೆ ಮುಂದುವರಿಕೆ ಅಗತ್ಯವಾಗಿದೆ. ಸಂಸ್ಥೆಯೊಂದಿಗೆ ಒಪ್ಪಂದ ನವೀಕರಿಸಿ ಎಂದು ರಾಜ್ಯ ಸರ್ಕಾರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ಜನಪ್ರಿಯ ಮಾರ್ಗದ ಸೇವೆ ಸ್ಥಗಿತಗೊಳ್ಳದಂತೆ ಸೂಕ್ತ ಕ್ರಮ ವಹಿಸಲು ಸಚಿವ ಎಂ.ಬಿ.ಪಾಟೀಲರಿಗೆ ಸಂಸದ ರಾಘವೇಂದ್ರ ಒತ್ತಾಯಿಸಿದ್ದಾರೆ.
ಇದೇ ಮೇ 1 ರಿಂದ ಇಂಡಿಗೋ ಏರ್ ಲೈನ್ಸ್ ನ ಬೆಂಗಳೂರು-ಶಿವಮೊಗ್ಗ-ಬೆಂಗಳೂರು ವಿಮಾನ ಸೇವೆ ಸ್ಥಗಿತಗೊಳ್ಳದಂತೆ ರಾಜ್ಯ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ವಹಿಸಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಸಚಿವರಿಗೆ ಪತ್ರ ಬರೆದಿರುವ ಸಂಸದರು, ಯಶಸ್ವಿಯಾಗಿ ನಡೆಯುತ್ತಿರುವ ಬೆಂಗಳೂರು ಮತ್ತು ಶಿವಮೊಗ್ಗ ಮಾರ್ಗದ ವಿಮಾನಯಾನ ಸೇವೆ ಸ್ಥಗಿತಗೊಂಡಲ್ಲಿ ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಲಕ್ಷಾಂತರ ಜನರಿಗೆ ವಾಯು ಸಂಪರ್ಕದ ಅನುಕೂಲ ತಪ್ಪಲಿದ್ದು, ಇದು ಮಲೆನಾಡು ಹಾಗು ಸುತ್ತಮುತ್ತಲಿನ ಜಿಲ್ಲೆಗಳ ಆರ್ಥಿಕತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದಿದ್ದಾರೆ.
ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣ, ಪ್ರಧಾನಮಂತ್ರಿಗಳಿಂದ ಲೋಕಾರ್ಪಣೆಗೊಂಡ ನಂತರ, ಈ ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, 2,400ಕ್ಕೂ ಹೆಚ್ಚು ವಿಮಾನ ಯಾನಗಳನ್ನು ನಿರ್ವಹಿಸಿದ್ದು, 1 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ ಎನ್ನುವುದು ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ಹೂಡಿಕೆಯ ಯಶಸ್ಸು ಹಾಗೂ ಸದೃಢತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ ಎಂದು ರಾಘವೇಂದ್ರ ತಿಳಿಸಿದ್ದಾರೆ.
ಆದರೆ ಪ್ರಸಕ್ತ ಹೊಸ ಹಾರಾಟ ಕರ್ತವ್ಯ ಸಮಯ ಮಿತಿ (FDTL) ನಿಯಮಗಳಿಂದ ಉಂಟಾಗಿರುವ ಪೈಲಟ್ ಕೊರತೆ ಹಾಗೂ ನವೀಕರಿಸದ ಏರ್ ಲೈನ್ ಒಪ್ಪಂದದ ಕಾರಣಗಳನ್ನು ಮುಂದಿಟ್ಟು ಇಂಡಿಗೋ ಸಂಸ್ಥೆ ಈ ಮಾರ್ಗವನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSIIDC) ಮತ್ತು ಇಂಡಿಗೋ ನಡುವಿನ ಮೂಲ ಒಪ್ಪಂದ ಆಗಸ್ಟ್ 2025ರಲ್ಲಿ ಮುಕ್ತಾಯವಾಗಿದ್ದು, ನಂತರವೂ ಕೂಡ ಇಂಡಿಗೋ ಸಮಸ್ಥೆ ಆರು ತಿಂಗಳ ಕಾಲ ಈ ಮಾರ್ಗದಲ್ಲಿ ವಿಮಾನಯಾನ ಮುಂದುವರಿಸಿತ್ತು. ಬದಲಾದ ಪರಿಸ್ಥಿತಿಗಳ ಹಿನ್ನಲೆಯಲ್ಲಿ, ಜನರ ಅನುಕೂಲದ ದೃಷ್ಟಿಯಿಂದ ರಾಜ್ಯ ಸರ್ಕಾರ ತುತ್ತಾಗಿ ಇಂಡಿಗೋ ಸಂಸ್ಥೆಯವರೊಂದಿಗೆ ಮಾತನಾಡಿ, ಒಪ್ಪಂದ ನವೀಕರಿಸುವ ನಿಟ್ಟಿನಲ್ಲಿ ಅಗತ್ಯ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ರಾಘವೇಂದ್ರ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ಸರ್ಕಾರಕ್ಕೆ ಸಂಸದರ 5 ಮನವಿ:
ಈ ನಿಟ್ಟಿನಲ್ಲಿ ಸಂಸದ ರಾಘವೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಐದು ನಿರ್ದಿಷ್ಟ ಮನವಿಗಳನ್ನು ಮಾಡಿಕೊಂಡಿದ್ದು, ಮೇ 1ರ ನಂತರವೂ ವಿಮಾನ ಸೇವೆ ಮುಂದುವರಿಯುವಂತೆ ಇಂಡಿಗೋ ಜೊತೆ ತಕ್ಷಣ ಸಂಧಾನ ನಡೆಸಬೇಕು; ಇಂಧನ ವೆಚ್ಚ ಮತ್ತು ಮಾರ್ಗ ದಟ್ಟಣೆ ಆಧಾರದ ಮೇಲೆ ಹಣಕಾಸು ಬೆಂಬಲ ಒಳಗೊಂಡ ಹೊಸ ಒಪ್ಪಂದ ರೂಪಿಸುವುದು; ಕನಿಷ್ಠ ಮುಂದಿನ ಎರಡು ವರ್ಷಗಳ ಅವಧಿಗೆ ಹಾಲಿ ಒಪ್ಪಂದ ನವೀಕರಿಸುವುದು; ಒಂದು ವೇಳೆ ಇಂಡಿಗೋ ಸಂಸ್ಥೆ ಹಿಂದೆ ಸರಿದರೆ ಬದಲಿ ಏರ್ ಲೈನ್ ಸಂಸ್ಥೆಗಳ ಸೇವೆ ನಿಯೋಜಿಸುವುದು; ಹಾಗೂ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಹಣಕಾಸು ಹೊರೆ ಕಡಿಮೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕು ಎಂದು ಸಚಿವ ಎಂ.ಬಿ.ಪಾಟೀಲರನ್ನು ಒತ್ತಾಯಿಸಿದ್ದಾರೆ.
“ರಾತ್ರಿ ಇಳಿಯುವಿಕೆ ಸೌಲಭ್ಯದಿಂದ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉನ್ನತೀಕರಿಸಲಾಗುತ್ತಿರುವ ಹೊತ್ತಿನಲ್ಲೇ ವಿಮಾನ ಸೇವೆ ನಿಲ್ಲುವುದು ಸಾರ್ವಜನಿಕರಿಗೆ ಅನುಕೂಲ ತಪ್ಪಿಸಿದಂತಾಗುತ್ತದೆ. ರಾತ್ರಿ ಇಳಿಯುವಿಕೆ ಸೌಲಭ್ಯದ ಸಂಪೂರ್ಣ ಪ್ರಯೋಜನ, ಹೆಚ್ಚಿನ ಸೇವೆಗಳನ್ನು ಜನರಿಗೆ ತಲುಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯೂ ಆಗಿದೆ ಮತ್ತು ಹೂಡಿಕೆಗೆ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಚಿವರಾದ ಎಂ.ಬಿ.ಪಾಟೀಲರು ತಕ್ಷಣವೇ ಸೂಕ್ತ, ಜನಪರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ” ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.
10,000ಕ್ಕೂ ಹೆಚ್ಚು ಕೈಗಾರಿಕೆಗಳು, ಜೋಗ ಜಲಪಾತ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು, ಮತ್ತು ಔಷಧೀಯ ಸಸ್ಯ, ಕೃಷಿ ಉದ್ಯಮ ಕ್ಷೇತ್ರಗಳನ್ನು ಒಳಗೊಂಡ ಮಲೆನಾಡಿಗೆ ವಾಯು ಸಂಪರ್ಕ ಕೇವಲ ಅನುಕೂಲದ ವಿಚಾರವಲ್ಲ, ಅದೊಂದು ಆರ್ಥಿಕ ಜೀವನಾಡಿ ಎಂದು ಅವರು ಸಂಸದ ರಾಘವೇಂದ್ರ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರು ಕೂಡಲೇ ಮಧ್ಯಪ್ರವೇಶಿಸಿ KSIIDC ಮೂಲಕ ಅಗತ್ಯ ತುರ್ತು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಪ್ರಾದೇಶಿಕ ವಿಮಾನ ಯಾನವನ್ನು ಬಲಪಡಿಸುವ ರಾಜ್ಯ ಸರ್ಕಾರದ ಬದ್ಧತೆ ಹಾಗೂ ವಿಶ್ವಾಸಾರ್ಹತೆ ಕೂಡ ಇದರಲ್ಲಿ ಅಡಕವಾಗಿರುವುದರಿಂದ ಮತ್ತು ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆ ಸಾಧಿಸಿದ ಪ್ರಗತಿಯನ್ನು ಸುಸ್ಥಿರವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.

