HomeIPL 2026IPL 2026: ಧೋನಿ ರನ್ ದಾಖಲೆ ಮುರಿದಿದ್ದೇನೆ, ಹಾಗೆಯೇ ಧೋನಿಯ 5 ಕಪ್ ದಾಖಲೆ ಮುರಿಯುವುದು...

IPL 2026: ಧೋನಿ ರನ್ ದಾಖಲೆ ಮುರಿದಿದ್ದೇನೆ, ಹಾಗೆಯೇ ಧೋನಿಯ 5 ಕಪ್ ದಾಖಲೆ ಮುರಿಯುವುದು ನನ್ನ ಗುರಿ ಎಂದ ಕೆಎಲ್ ರಾಹುಲ್

ನಿನ್ನೆ ( ಮೇ 1 ) ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 226 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 226 ರನ್ ಬಾರಿಸಿತು.

ಈ ದೊಡ್ಡ ರನ್ ಚೇಸ್‌ನಲ್ಲಿ 40 ಎಸೆತಗಳಲ್ಲಿ 75 ರನ್ ಬಾರಿಸಿದ ಕೆಎಲ್ ರಾಹುಲ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 264 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ 67 ಎಸೆತಗಳಲ್ಲಿ 152 ರನ್ ಚಚ್ಚುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತದ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಈ ಇನ್ನಿಂಗ್ಸ್‌ನಲ್ಲೇ ರಾಹುಲ್ ಧೋನಿ ಹೆಸರಿನಲ್ಲಿದ್ದ ಐಪಿಎಲ್‌ನಲ್ಲಿ ಹೆಚ್ಚು ರನ್ ಬಾರಿಸಿದ ವಿಕೆಟ್ ಕೀಪರ್ ದಾಖಲೆಯನ್ನು ಮುರಿದರು. ಹೌದು, ಧೋನಿ 5439 ರನ್ ಗಳಿಸಿದ್ದು, ಸದ್ಯಕ್ಕೆ ರಾಹುಲ್ 5655 ರನ್‌ಗಳನ್ನು ಬಾರಿಸಿದ್ದಾರೆ. ಈ ಕುರಿತು ಮಾತನಾಡಿರುವ ರಾಹುಲ್ ಧೋನಿ ದಾಖಲೆಯನ್ನು ಮುರಿದಿದ್ದು ಗೊತ್ತೇ ಇರಲಿಲ್ಲ ಎಂದಿದ್ದಾರೆ.

‘ಐಪಿಎಲ್ ಅತ್ಯಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮಹಿ ಭಾಯ್‌ರನ್ನು ಹಿಂದಿಕ್ಕಿದ್ದೇನೆ ಎಂಬುದು ಗೊತ್ತೇ ಇರಲಿಲ್ಲ. ನಿಜ ಹೇಳಬೇಕೆಂದರೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಗೆದ್ದುಕೊಟ್ಟಿರುವ ಐದು ಟ್ರೋಫಿ ದಾಖಲೆಯನ್ನು ಮಾಡಬೇಕೆಂಬುದು ನನ್ನ ಗುರಿ’ ಎಂದು ಕೆಎಲ್ ರಾಹುಲ್ ತಿಳಿಸಿದರು.

‘ನೀವು ಸುದೀರ್ಘ ಕಾಲ ಆಟವನ್ನಾಡಿದರೆ ವೈಯಕ್ತಿಕ ದಾಖಲೆಗಳು ವಿಶೇಷವೆನಿಸುತ್ತವೆ. ಅವುಗಳು ನಿಮ್ಮ ಕಠಿಣ ಪರಿಶ್ರಮ ಹಾಗೂ ತ್ಯಾಗಕ್ಕೆ ಸಿಕ್ಕ ಬೆಲೆ. ಆದರೆ ದಿನದಂತ್ಯಕ್ಕೆ ಕ್ರಿಕೆಟ್ ಒಂದು ಕ್ರೀಡೆ. ನೀವು ಟ್ರೋಫಿಗಳನ್ನು ಗೆಲ್ಲಬೇಕು, ಯಶಸ್ವಿ ತಂಡದ ಪರ ಆಡಿರಬೇಕು. ಅದು ಯಾವಾಗಲೂ ನನ್ನ ಗುರಿಯಾಗಿದೆ. ಯಾವ ತಂಡದ ಪರ ಆಡುತ್ತೇನೋ ಅದು ಮುಖ್ಯವಲ್ಲ, ಪ್ರತಿ ಬಾರಿ ನಾನು ನನ್ನಿಂದಾದಷ್ಟು ಒಳ್ಳೆಯ ಆಟವನ್ನಾಡಿ ಕೊಡುಗೆ ನೀಡುತ್ತೇನೆ. ವೈಯಕ್ತಿಕ ದಾಖಲೆಗಳು ನಾನು ಸರಿ ದಾರಿಯಲ್ಲಿದ್ದೇನೆ ಎಂದು ಹೇಳುತ್ತವೆ. ಆದರೆ ಎಂಎಸ್ ಧೋನಿಯ ಹಾಗೆ ಟ್ರೋಫಿಗಳನ್ನು ಗೆಲ್ಲುವುದು ನನಗೆ ನಿಜವಾದ ಸಂತೋಷವನ್ನು ನೀಡುತ್ತದೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular