ಇಂದು ( ಮೇ 29 ) ಮುಲ್ಲಾನ್ಪುರದ ಮಹಾರಾಜ ಯದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್ಗಳ ಗೆಲುವನ್ನು ದಾಖಲಿಸಿ ಫೈನಲ್ ಪ್ರವೇಶ ಮಾಡಿದೆ. ಈ ಮೂಲಕ ಒಂದನೇ ಕ್ವಾಲಿಫಯರ್ ಬಳಿಕ ಮತ್ತೊಮ್ಮೆ ಗುಜರಾತ್ ಟೈಟನ್ಸ್ ರಾಯಲ್ ಬೆಂಗಳೂರು ತಂಡಕ್ಕೆ ಎದುರಾಳಿಯಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ, ಡೊನೊವೆನ್ ಫೆರೇರಾ ಅಬ್ಬರದ ಬ್ಯಾಟಿಂಗ್ ಹಾಗೂ ರವೀಂದ್ರ ಜಡೇಜಾ ಜವಾಬ್ದಾರಿಯುತ ಆಟದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು, ಗುಜರಾತ್ ಟೈಟನ್ಸ್ಗೆ 215 ರನ್ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಆರಂಭಿಕರಾದ ಶುಬ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಉತ್ತಮ ಆಟದ ನೆರವಿನಿಂದ 18.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 219 ರನ್ ಕಲೆಹಾಕಿದೆ.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಕೇವಲ 9 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಯಶಸ್ವಿ ಜೈಸ್ವಾಲ್ 1 ಹಾಗೂ ಧ್ರುವ್ ಜುರೆಲ್ ಕೇವಲ 7 ರನ್ಗೆ ವಿಕೆಟ್ ಒಪ್ಪಿಸಿದರು. ಈ ಸಮಯದಲ್ಲಿ ಒಂದಾದ ವೈಭವ್ ಸೂರ್ಯವಂಶಿ ಹಾಗೂ ರವೀಂದ್ರ ಜಡೇಜಾ ಮೂರನೇ ವಿಕೆಟ್ಗೆ 127 ರನ್ಗಳ ಜತೆಯಾಟವಾಡುವ ಮೂಲಕ ಕುಸಿದಿದ್ದ ತಂಡಕ್ಕೆ ಆಸರೆಯಾದರು. ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 96 ರನ್ ಚಚ್ಚಿದರೆ, ರವೀಂದ್ರ ಜಡೇಜಾ ಜವಾಬ್ದಾರಿಯುತ ಆಟವನ್ನಾಡಿ 35 ಎಸೆತಗಳಲ್ಲಿ 45 ರನ್ ಅಜೇಯರಾಗಿ ಉಳಿದರು. ಇನ್ನುಳಿದಂತೆ ನಾಯಕ ರಿಯಾನ್ ಪರಾಗ್ 11, ದಸುನ್ ಶನಕ 3, ಜೋಫ್ರಾ ಆರ್ಚರ್ 7 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಡೊನೊವೆನ್ ಫೆರೇರಾ 11 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 38 ರನ್ ಬಾರಿಸಿದರು.
ಕಗಿಸೊ ರಬಾಡಾ ಹಾಗೂ ಜೇಸನ್ ಹೋಲ್ಡರ್ ತಲಾ ಎರಡು ವಿಕೆಟ್, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶುಬ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ 77 ಎಸೆತಗಳಲ್ಲಿ 167 ರನ್ಗಳ ಜತೆಯಾಟವನ್ನಾಡಿ ಅತ್ಯುತ್ತಮ ಆರಂಭವನ್ನು ಕಟ್ಟಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಸಾಯಿ ಸುದರ್ಶನ್ 32 ಎಸೆತಗಳಲ್ಲಿ 58 ರನ್ ಬಾರಿಸಿದರೆ, ಶುಬ್ಮನ್ ಗಿಲ್ 53 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 104 ರನ್ ಬಾರಿಸಿದರು. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ 16, ರಾಹುಲ್ ತೆವಾಟಿಯಾ ಅಜೇಯ 17 ಹಾಗೂ ಜೋಸ್ ಬಟ್ಲರ್ ಅಜೇಯ 9 ರನ್ ಬಾರಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್ ಹಾಗೂ ಬ್ರಿಜೇಶ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

