ನಿನ್ನೆ ( ಏಪ್ರಿಲ್ 28 ) ಮುಲ್ಲಾನ್ಪುರದ ಮಹಾರಾಜ ಯದವೀಂದ್ರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ಗಳ ಗೆಲುವನ್ನು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿದ್ದ ಪಂಜಾಬ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 223 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 19.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಬಾರಿಸಿತು.
ಪಂಜಾಬ್ ಕಿಂಗ್ಸ್ ನೀಡಿದ ಸವಾಲಿ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ಗೆ ಆರಂಭಿಕರಾದ ಜೈಸ್ವಾಲ್ ಅರ್ಧಶತಕ ಹಾಗೂ ವೈಭವ್ 43 ರನ್ ಬಾರಿಸಿ ಉತ್ತಮ ಆರಂಭ ಕಟ್ಟಿಕೊಟ್ಟರು. ಧ್ರುವ್ ಜುರೆಲ್ 16 ಹಾಗೂ ನಾಯಕ ರಿಯಾನ್ ಪರಾಗ್ 26 ರನ್ಗಳ ಕೊಡುಗೆ ನೀಡಿದರು. ಅಲ್ಲಿಗೆ 14 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 151 ರನ್ ಕಳೆದುಕೊಂಡ ರಾಜಸ್ಥಾನಕ್ಕೆ 36 ಎಸೆತಗಳಲ್ಲಿ 72 ರನ್ಗಳ ಅಗತ್ಯವಿತ್ತು. ಈ ಸಮಯದಲ್ಲಿ 6 ಎಸೆತಗಳಲ್ಲಿ 8 ರನ್ ಕಲೆಹಾಕಿ ಕಣದಲ್ಲಿದ್ದ ಡೊನೊವನ್ ಫೆರೇರಾ ಜತೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಶುಭಮ್ ದುಬೆ ಕೈಜೋಡಿಸಿದರು. ಈ ಜೋಡಿ 32 ಎಸೆತಗಳಲ್ಲಿ 77 ರನ್ಗಳ ಜತೆಯಾಟವಾಡಿ ಇನ್ನೂ ನಾಲ್ಕು ಎಸೆತಗಳನ್ನು ಬಾಕಿ ಉಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಶುಭಮ್ ದುಬೆ 12 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದರೆ, ಡೊನೊವನ್ ಫೆರೇರಾ 26 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 52 ರನ್ ಬಾರಿಸಿದರು.
ತಂಡ ಪ್ರಮುಖ ವಿಕೆಟ್ಗಳು ಬಿದ್ದಾಗ ಜವಾಬ್ದಾರಿಯುತ ಆಟವನ್ನಾಡಿ ಅಬ್ಬರಿಸಿ ಗೆಲುವಿಗೆ ಪ್ರಮುಖ ಕಾರಣರಾದ ಡೊನೊವನ್ ಫೆರೇರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹೀಗೆ ರಾಜಸ್ಥಾನ್ ರಾಯಲ್ಸ್ ಪರ ಹೀರೊ ಆಗಿ ಟೂರ್ನಿಯಲ್ಲಿ ಸೋಲನ್ನೇ ಕಾಣದ ಪಂಜಾಬ್ ಕಿಂಗ್ಸ್ಗೆ ಸೋಲಿನ ರುಚಿ ಉಣಿಸಿದ ಫೆರೇರಾ ವಿಡಿಯೊ ಮೂಲಕ ಪ್ರೀತಿ ಜಿಂಟಾ ಹಾಗೂ ಸಲ್ಮಾನ್ ಖಾನ್ ಕಾಲೆಳೆದಿದ್ದಾರೆ.
ಈ ಹಿಂದೆ ಟ್ವೀಟ್ ಮಾಡಿ ಪ್ರೀತಿ ಜಿಂಟಾ ತಂಡ ಗೆಲ್ತಾ? ಎಂದು ಬರೆದುಕೊಂಡು ವೈರಲ್ ಆಗಿದ್ದ ಸಲ್ಮಾನ್ ಖಾನ್ ಟ್ರೋಲ್ ಆಗಿದ್ದರು. ಆಗಾಗ ಈ ಟ್ವೀಟ್ ಅನ್ನು ಹಂಚಿಕೊಳ್ಳುವ ನೆಟ್ಟಿಗರು ಪ್ರೀತಿ ಜಿಂಟಾ ಹಾಗೂ ಸಲ್ಮಾನ್ ಟ್ರೋಲ್ ಮಾಡುತ್ತಿದ್ದರು.
ಈ ಟ್ವೀಟ್ ಅನ್ನು ಇತ್ತೀಚೆಗಷ್ಟೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಗೆದ್ದಾಗ ಬಳಸಿಕೊಂಡಿದ್ದ ಪಂಜಾಬ್ ಕಿಂಗ್ಸ್ ತಂಡದ ಆಟಗಾರರು ಹೌದು ಭಾಯ್ ಪ್ರೀತಿ ಜಿಂಟಾ ತಂಡ ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ಚೇಸ್ ಮಾಡಿ ಗೆದ್ದಿದೆ ಎಂದು ಹೇಳಿಕೆಗಳನ್ನು ಕೊಟ್ಟಿದ್ದರು.
ಅದೇ ರೀತಿ ರಾಜಸ್ಥಾನ್ ಸಹ ವಿಡಿಯೊ ಅಪ್ಡೇಟ್ ಮಾಡಿದ್ದು, ಈ ವಿಡಿಯೊದಲ್ಲಿ ಡೊನೊವನ್ ಫೆರೇರಾ ‘ಸಾರಿ ಭಾಯ್, ಈ ದಿನವಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

