ನಿನ್ನೆ ( ಏಪ್ರಿಲ್ 8 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು.
ಉಭಯ ತಂಡಗಳ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 1 ರನ್ ಅಂತರದಿಂದ ಗೆದ್ದು ಬೀಗಿತು. ಅತ್ತ ಕೊನೆಯ ಹಂತದಲ್ಲಿ ತನ್ನ ಕೈಗೆ ಬಂದಿದ್ದ ಪಂದ್ಯವನ್ನು ಕೈಚೆಲ್ಲಿ ಡೆಲ್ಲಿ ಬೇಸರಕ್ಕೊಳಗಾಯಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್ಗೆ 211 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಕಲೆಹಾಕಿತು.
12 ಎಸೆತಗಳಲ್ಲಿ 36 ರನ್ ಬೇಕಿದ್ದಾಗ ಸಿರಾಜ್ ಎಸೆದ 19ನೇ ಓವರ್ನಲ್ಲಿ ಮಿಲ್ಲರ್ ಎರಡು ಸಿಕ್ಸರ್, ಒಂದು ಬೌಂಡರಿ ಮತ್ತು ವಿಪ್ರಾಜ್ ನಿಗಮ್ ಒಂದು ಬೌಂಡರಿ ಮತ್ತು ಒಂದು ಸಿಂಗಲ್ ರನ್ ಗಳಿಸಿದ ಪರಿಣಾಮ ಆ ಓವರ್ 23 ರನ್ ಹರಿದುಬಂತು. ಅಲ್ಲಿಗೆ ಕೊನೆಯ ಆರು ಎಸೆತಗಳಿಗೆ ಗೆಲ್ಲಲು 13 ರನ್ಗಳ ಅಗತ್ಯವಿತ್ತು. ಪ್ರಸಿದ್ಧ್ ಕೃಷ್ಣ ಎಸೆದ ಕೊನೆಯ ಓವರ್ನ ಮೊದಲ ಎಸೆತಕ್ಕೆ ಬೌಂಡರಿ ಬಾರಿಸಿದ ವಿಪ್ರಾಜ್ ನಿಗಮ್ ನಂತರದ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೆ ಕಣಕ್ಕಿಳಿದ ಕುಲ್ದೀಪ್ ಯಾದವ್ ಸಿಂಗಲ್ ತೆಗೆದುಕೊಂಡು ಮಿಲ್ಲರ್ಗೆ ಸ್ಟ್ರೈಕ್ ನೀಡಿದರು. 3 ಎಸೆತಗಳಿಗೆ 8 ರನ್ ಬೇಕಿದ್ದಾಗ ಭರ್ಜರಿ ಸಿಕ್ಸರ್ ಬಾರಿಸಿದ ಮಿಲ್ಲರ್ ಓವರ್ನ ಐದನೇ ಎಸೆತಕ್ಕೆ ಯಾವುದೇ ರನ್ ಬಾರಿಸಲಿಲ್ಲ ಹಾಗೂ ಒಂದು ರನ್ ಓಡುವ ಅವಕಾಶವಿದ್ದರೂ ಕಡೆಗಣಿಸಿದರು. ಈ ಮೂಲಕ ಕೊನೆಯ ಎಸೆತಕ್ಕೆ ಎರಡು ರನ್ ಬಾರಿಸಬೇಕಾದ ಅನಿವಾರ್ಯತೆ ಎದುರಾಯಿತು. ಕೊನೆಯ ಬೌನ್ಸರ್ ಎಸೆತವನ್ನು ಎದುರಿಸುವಲ್ಲಿ ಮಿಲ್ಲರ್ ವಿಫಲರಾದ ಕಾರಣ ಚೆಂಡು ವಿಕೆಟ್ ಕೀಪರ್ ಕೈಸೇರಿತ್ತು. ಈ ಸಮಯದಲ್ಲಿ ರನ್ ಕದ್ದು ಡ್ರಾ ಮಾಡಿಕೊಳ್ಳಲು ಮುಂದಾದರಾದರೂ ಕುಲ್ದೀಪ್ ಯಾದವ್ ರನ್ಔಟ್ ಆದರು.
ಹೀಗೆ ಅಂತಿಮ ಹಂತದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದರೂ ತಾನು ಕೊನೆಯ ಓವರ್ನ ಐದನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳಲು ನಿರಾಕರಿಸಿದ್ದು ಮಿಲ್ಲರ್ಗೆ ಪಂದ್ಯ ಸೋತ ಬೆನ್ನಲ್ಲೇ ಕಾಡತೊಡಗಿತು. ಹೀಗಾಗಿ ಅವರು ಮೈದಾನದಲ್ಲಿಯೇ ತಲೆ ಮೇಲೆ ಕೈಹೊತ್ತು ಬೇಸರಕ್ಕೊಳಗಾದರು. ಅಲ್ಲದೇ ಡ್ರೆಸಿಂಗ್ ರೂಮ್ನಲ್ಲೂ ಸಹ ಮಿಲ್ಲರ್ ಒಬ್ಬರೇ ಕುಳಿತು ಕಣ್ಣೀರು ಹಾಕಿದ್ದಾರೆ. ಈ ವಿಡಿಯೊವನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

