ವಾಂಖೆಡೆಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 23 ) ನಡೆದ ಐಪಿಎಲ್ 2026ರ ಲೀಗ್ ಹಂತದ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡಗಳು ವಿರುದ್ಧ 103 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 208 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 19 ಓವರ್‌ಗಳಲ್ಲಿ ಕೇವಲ 104 ರನ್‌ಗೆ ಆಲ್‌ಔಟ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 54 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 101 ರನ್ ಬಾರಿಸಿ ಕೊನೆಯ ಎಸೆತದವರೆಗೂ ಕಣದಲ್ಲಿದ್ದರು. ಇನ್ನುಳಿದಂತೆ ರುತುರಾಜ್ ಗಾಯಕ್ವಾಡ್ 22, ಸರ್ಫರಾಜ್ ಖಾನ್ 14, ಶಿವಮ್ ದುಬೆ 5, ಡಿವಾಲ್ಡ್ ಬ್ರೆವಿಸ್ 21, ಕಾರ್ತಿಕ್ ಶರ್ಮಾ 18, ಜೇಮಿ ಓವರ್ಟನ್ 15 ಹಾಗೂ ಅಕೇಲ್ ಹೊಸೈನ್ ಅಜೇಯ 2 ರನ್ ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಎಎಂ ಘಜನ್ಫರ್ ಹಾಗೂ ಅಶ್ವನಿ ಕುಮಾರ್ ತಲಾ ಎರಡು ವಿಕೆಟ್, ಜಸ್‌ಪ್ರೀತ್ ಬುಮ್ರಾ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ 7 ರನ್ ಹಾಗೂ ಡ್ಯಾನಿಷ್ ಮಲೆವರ್ ಡಕ್‌ಔಟ್ ಆದರೆ, ಬೆನ್ನಲ್ಲೇ ನಮನ್ ಧೀರ್ ಡಕ್‌ಔಟ್ ಆದರು. ಈ ಮೂಲಕ ಕೇವಲ 11 ರನ್‌ಗೆ 3 ವಿಕೆಟ್ ಕಳೆದುಕೊಂಡ ಮುಂಬೈ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ 73 ರನ್‌ಗಳ ಜತೆಯಾಟವಾಡುವ ಮೂಲಕ ಸುಧಾರಣೆ ತಂದರಾದರೂ ಈ ಇಬ್ಬರ ವಿಕೆಟ್ ಬಿದ್ದ ಬಳಿಕ ಮತ್ತೆ ತಂಡದ ಆಟಗಾರರ ಪೆವಿಲಿಯನ್ ಪರೇಡ್ ಮುಂದುವರಿಯಿತು. ಸೂರ್ಯಕುಮಾರ್ ಯಾದವ್ 36 ರನ್ ಹಾಗೂ ತಿಲಕ್ ವರ್ಮಾ 37 ರನ್ ಕಲೆಹಾಕಿದರೆ, ನಾಯಕ ಹಾರ್ದಿಕ್ ಪಾಂಡ್ಯ 1, ಶೆರ್ಫೇನ್ ರುದರ್‌ಫೋರ್ಡ್ ಡಕ್‌ಔಟ್, ಶಾರ್ದೂಲ್ ಠಾಕೂರ್ 6, ಕ್ರಿಶ್ ಭಾಗತ್ 7, ಜಸ್‌ಪ್ರೀತ್ ಬುಮ್ರಾ 2 ಹಾಗೂ ಅಶ್ವನಿ ಕುಮಾರ್ 1 ರನ್ ಕಲೆಹಾಕಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಅಕೈಲ್ ಹೊಸೈನ್ ನಾಲ್ಕು ವಿಕೆಟ್, ನೂರ್ ಅಹ್ಮದ್ ಎರಡು ವಿಕೆಟ್, ಮುಕೇಶ್ ಚೌಧರಿ, ಅನ್ಶುಲ್ ಕಾಂಬೋಜ್, ಜೇಮಿ ಓವರ್ಟನ್ ಹಾಗೂ ಗುರ್ಜನ್‌ಪ್ರೀತ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

