ನಿನ್ನೆ ( ಏಪ್ರಿಲ್ 19 ) ಮುಲ್ಲಾನ್‌ಪುರದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 29ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 54 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಒಟ್ಟು 11 ಅಂಕಗಳನ್ನು ಹೊಂದಿ ಸೋಲಿಲ್ಲದ ಸರದಾರನಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಈ ಮೂಲಕ ಪಂಜಾಬ್ ಕಿಂಗ್ಸ್ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದು, ಪಂದ್ಯ ಮುಗಿದ ಬಳಿಕ ತಂಡದ ಆಟಗಾರರು ಹಾಗೂ ಕೋಚ್ ಜತೆ ಫ್ರಾಂಚೈಸಿಯ ಸಹ ಮಾಲೀಕರಾದ ನಟಿ ಪ್ರೀತಿ ಜಿಂಟಾ ಸಂತಸದಿಂದ ಮಾತನಾಡುತ್ತಾ ಸಮಯ ಕಳೆದಿದ್ದಾರೆ.
ಗೆಲುವು ಸಾಧಿಸಿದಾಗೆಲ್ಲ ಮೈದಾನಕ್ಕೆ ಬಂದು ಆಟಗಾರರನ್ನು ಮಾತನಾಡಿಸಿ, ವಿವಿಧ ಸ್ಟ್ಯಾಂಡ್‌ಗಳ ಬಳಿ ತೆರಳಿ ಅಭಿಮಾನಿಗಳ ಫೋಟೊ ಹಾಗೂ ವಿಡಿಯೊ ಕ್ಲಿಕ್ಕಿಸಿ, ಸೆಲ್ಫಿ ತೆಗೆದುಕೊಳ್ಳುವ ಜಿಂಟಾ ನಿನ್ನೆಯೂ ಸಹ ಅದರಲ್ಲಿ ತೊಡಗಿಸಿಕೊಂಡಿದ್ದರು.
ಈ ವೇಳೆ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ವೇಗಿ ಅರ್ಷ್‌ದೀಪ್ ಸಿಂಗ್ ಬಳಿ ಬಂದ ಪ್ರೀತಿ ಜಿಂಟಾ ಅಪ್ಪುಗೆಯನ್ನು ನೀಡಿದ್ದಾರೆ. ಜಿಂಟಾ ಅಪ್ಪುಗೆ ನೀಡಿದ ಬೆನ್ನಲ್ಲೇ ಅರ್ಷ್‌ದೀಪ್ ಸಿಂಗ್ ತನ್ನ ಎರಡೂ ಕೈ ಮೇಲೆತ್ತಿ ಹರ್ಷದಿಂದ ಕುಣಿದಾಡಿದ್ದಾರೆ. ಈ ಮೂಲಕ ಬಾಲ್ಯದ ಕ್ರಶ್ ನಟಿಯ ಅಪ್ಪುಗೆಯನ್ನು ಅರ್ಷ್‌ದೀಪ್ ಸಿಂಗ್ ಸಂಭ್ರಮಿಸಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅರ್ಷ್‌ದೀಪ್ ಸಿಂಗ್ ಎಲ್ಲವನ್ನೂ ಗೆದ್ದವರ ಹಾಗೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

