ನವದೆಹಲಿ: ಭಾರತದಲ್ಲಿ ಆಪಲ್ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾರಾಟ ಸೆಪ್ಟೆಂಬರ್ 18ರಿಂದ ಆರಂಭವಾಗಿದೆ. ಹೊಸ ಐಫೋನ್ ಖರೀದಿಸಲು ದೇಶದ ಹಲವು ನಗರಗಳ ಆ್ಯಪಲ್ ಸ್ಟೋರ್ಗಳ ಮುಂದೆ ಜನರು ಉದ್ದನೆಯ ಸಾಲಿನಲ್ಲಿ ನಿಂತಿರುವುದು ಗಮನ ಸೆಳೆದಿದೆ. ಈ ಐಫೋನ್ ಕ್ರೇಜ್ ಕುರಿತು ನಟ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
https://x.com/SonuSood/status/2100797357793403142
‘ನಿಜವಾದ ಅಪ್ಗ್ರೇಡ್ ಉತ್ತಮ ಸಮಾಜ’
ಸೋನು ಸೂದ್ ತಮ್ಮ ಎಕ್ಸ್ (X) ಖಾತೆಯಲ್ಲಿ ಆ್ಯಪಲ್ ಸ್ಟೋರ್ ಹೊರಗೆ ಗ್ರಾಹಕರು ಸಾಲಿನಲ್ಲಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ಕೇವಲ ಸ್ಮಾರ್ಟ್ಫೋನ್ ಅಪ್ಗ್ರೇಡ್ ಮಾಡುವ ಬದಲು ಸಮಾಜದಲ್ಲಿ ಬದಲಾವಣೆ ತರಲು ಇದೇ ರೀತಿಯ ಉತ್ಸಾಹ ತೋರಿಸಬೇಕು ಎಂದು ಅವರು ಹೇಳಿದ್ದಾರೆ.
“ಹೊಸ ಫೋನ್, ಹೊಸ EMI… ಅದೇ ಹಳೆಯ ಬಿಲ್ಗಳು ಬಹುಶಃ ನಾವು ಕೇವಲ ಫೋನ್ ಅಪ್ಗ್ರೇಡ್ ಮಾಡಲು ಮಾತ್ರವಲ್ಲ, ಬದಲಾವಣೆ ತರಲು ಕೂಡ ಸಾಲಿನಲ್ಲಿ ನಿಲ್ಲುವ ಸಮಯ ಬಂದಿದೆ. ನಿಜವಾದ ಅಪ್ಗ್ರೇಡ್ ಎಂದರೆ ಉತ್ತಮ ಸಮಾಜ” ಎಂದು ಸೋನು ಸೂದ್ ಬರೆದಿದ್ದಾರೆ.
ಅವರ ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣ ಬಳಕೆದಾರರಿಂದಲೂ ಹಲವು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ನಟನ ಸಂದೇಶಕ್ಕೆ ಸಹಮತ ವ್ಯಕ್ತಪಡಿಸಿದ್ದು, ದುಬಾರಿ ಗ್ಯಾಜೆಟ್ಗಳ ಮೇಲಿನ ಆಸಕ್ತಿಯ ಜೊತೆಗೆ ಸಮಾಜದ ಸುಧಾರಣೆಯತ್ತವೂ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ದೇಶಾದ್ಯಂತ ಐಫೋನ್ ಕ್ರೇಜ್
ಐಫೋನ್ 18 ಸರಣಿಯ ಮಾರಾಟ ಆರಂಭವಾಗುತ್ತಿದ್ದಂತೆ ದೇಶದ ಹಲವು ನಗರಗಳ ಆ್ಯಪಲ್ ಸ್ಟೋರ್ಗಳ ಮುಂದೆ ಬೆಳಗ್ಗಿನಿಂದಲೇ ಜನರು ಸಾಲಿನಲ್ಲಿ ನಿಂತಿದ್ದರು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC)ನ ಆ್ಯಪಲ್ ಸ್ಟೋರ್ಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಕೂಡ ಭೇಟಿ ನೀಡಿ ಹೊಸ ಫೋನ್ ಪರಿಶೀಲಿಸುತ್ತಿರುವುದು ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.
ಬೆಂಗಳೂರಿನ ರಾಹುಲ್ ಎಂಬ ಗ್ರಾಹಕರು ತಾವು ಐಫೋನ್ 7ರಿಂದಲೂ ಪ್ರತಿ ವರ್ಷ ಹೊಸ ಐಫೋನ್ ಖರೀದಿಸುತ್ತಿರುವುದಾಗಿ ಹೇಳಿದ್ದಾರೆ. ಅವರು ಬೆಳಗ್ಗೆ 5 ಗಂಟೆಗೆ ಸ್ಟೋರ್ಗೆ ಆಗಮಿಸಿದ್ದು, ಹರಿಯಾಣ, ದೆಹಲಿ ಮತ್ತು ಮುಂಬೈ ಸೇರಿದಂತೆ ಹಲವು ರಾಜ್ಯಗಳಿಂದ ಗ್ರಾಹಕರು ಬಂದಿದ್ದರು ಎಂದು ತಿಳಿಸಿದ್ದಾರೆ.“ಐಫೋನ್ ಲಾಂಚ್ ಒಂದು ಹಬ್ಬದಂತಿದೆ. ಪ್ರತಿವರ್ಷ ನಾನು ಐಫೋನ್ ಖರೀದಿಸಲು ಪ್ರಯತ್ನಿಸುತ್ತೇನೆ” ಎಂದು ರಾಹುಲ್ ಹೇಳಿದ್ದಾರೆ.
ಐಫೋನ್ 18 ಪ್ರೊ ಬೆಲೆ ಎಷ್ಟು?
ಭಾರತದಲ್ಲಿ ಐಫೋನ್ 18 ಪ್ರೊ 256GB ಮಾದರಿಗೆ ₹1,64,900 ಆರಂಭಿಕ ಬೆಲೆ ಇದೆ. 512GB ಮಾದರಿ ₹1,89,900, 1TB ಮಾದರಿ ₹2,39,900 ಹಾಗೂ 2TB ಮಾದರಿ ₹3,14,900 ಬೆಲೆಗೆ ಲಭ್ಯವಿದೆ.
ಇನ್ನು ಐಫೋನ್ 18 ಪ್ರೊ ಮ್ಯಾಕ್ಸ್ 256GB ಮಾದರಿಗೆ ₹1,79,900 ಆರಂಭಿಕ ಬೆಲೆ ನಿಗದಿಯಾಗಿದೆ. 512GB ಮಾದರಿ ₹2,04,900, 1TB ಮಾದರಿ ₹2,54,900 ಹಾಗೂ 2TB ಮಾದರಿ ₹3,29,900 ಬೆಲೆಗೆ ಮಾರಾಟವಾಗುತ್ತಿದೆ.
ಹೊಸ ಐಫೋನ್ಗಳಲ್ಲಿ 48MP Fusion Main ಕ್ಯಾಮೆರಾ, ವೇರಿಯಬಲ್ ಅಪರ್ಚರ್, ಹೊಸ Pro ಕ್ಯಾಮೆರಾ ಕಂಟ್ರೋಲ್ಗಳು ಮತ್ತು A20 Pro ಚಿಪ್ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ಹೊಸ ವಾಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.
ಸೋನು ಸೂದ್ ಪೋಸ್ಟ್ಗೆ ಬಳಕೆದಾರರ ಪ್ರತಿಕ್ರಿಯೆ
ಸೋನು ಸೂದ್ ಅವರ ಪೋಸ್ಟ್ಗೆ ಹಲವು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಬ್ಬರು “₹1.5 ಲಕ್ಷದ ಫೋನ್ ಹಿಡಿದು ರೀಲ್ಸ್ ನೋಡಲು ಮಧ್ಯರಾತ್ರಿಯಿಂದಲೇ ಸಾಲಿನಲ್ಲಿ ನಿಲ್ಲುತ್ತಾರೆ. ಇದೇ ಉತ್ಸಾಹವನ್ನು ಸಮಾಜ ಬದಲಾವಣೆಗೆ ತೋರಿಸಿದರೆ ಉತ್ತಮ” ಎಂದು ಹೇಳಿದ್ದಾರೆ.ಮತ್ತೊಬ್ಬರು ಐಫೋನ್ ಕ್ರೇಜ್ ಅನ್ನು ವ್ಯಂಗ್ಯವಾಗಿ ಟೀಕಿಸಿದರೆ, ಇನ್ನೊಬ್ಬರು ದುಬಾರಿ ಫೋನ್ಗಳ ಬಿಲ್ಗಳ ಹೊರೆ ಹೊರುವ ಬದಲು ಸಮಾಜದ ಸುಧಾರಣೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

