HomeIndiaಮಹಿಳೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಣೆ: IOCL ಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌ !

ಮಹಿಳೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಣೆ: IOCL ಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌ !

ಎಲ್ಲ ಅರ್ಹತೆಗಳಿದ್ದರೂ ಕೇವಲ ‘ಮಹಿಳೆ’ ಎಂಬ ಏಕೈಕ ಕಾರಣಕ್ಕೆ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ನಲ್ಲಿ ರೀಫಿಲ್ಲಿಂಗ್ ಹೆಲ್ಪರ್ ಹುದ್ದೆಯ ಉದ್ಯೋಗ ನಿರಾಕರಿಸಿದ್ದ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ (IOCL) ಸುಪ್ರೀಂ ಕೋರ್ಟ್ ಬಿಸಿ ಮುಟ್ಟಿಸಿದೆ. ಉದ್ಯೋಗ ವಂಚಿತ ಮಹಿಳೆಗೆ 12 ಲಕ್ಷ ರೂಪಾಯಿಗಳ ಒಟ್ಟು ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠವು ಈ ಆದೇಶ ನೀಡಿದ್ದು, ಸಾರ್ವಜನಿಕ ಉದ್ದಿಮೆಯ ಇಂತಹ ತಾರತಮ್ಯದ ನಡೆಯನ್ನು ಮಹಿಳಾ ಗೌರವ ಮತ್ತು ಮಾತೃತ್ವಕ್ಕೆ ಬಗೆದ ಅಪಚಾರ ಎಂದು ಕಟುವಾಗಿ ಆಕ್ಷೇಪಿಸಿದೆ. ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟದ ನಡುವೆ ಸಂತ್ರಸ್ತೆ ಈಗಾಗಲೇ ನಿವೃತ್ತಿಯ ವಯಸ್ಸನ್ನು ತಲುಪಿರುವುದರಿಂದ, ಈಗ ಉದ್ಯೋಗ ಆದೇಶ ನೀಡುವ ಬದಲು ಏಕಗಂಟಿನ ಆರ್ಥಿಕ ಪರಿಹಾರ ನೀಡುವುದೇ ಸೂಕ್ತ ಎಂದು ನ್ಯಾಯಪೀಠ ನಿರ್ಧರಿಸಿತು.

ವಿಚಾರಣೆ ವೇಳೆ ಐಒಸಿಎಲ್ ಪರ ವಕೀಲರು, ಈ ಹುದ್ದೆಯು ಗ್ಯಾಸ್ ಸಿಲಿಂಡರ್ ಎತ್ತುವ ದೈಹಿಕ ಶ್ರಮ ಮತ್ತು ರಾತ್ರಿ ಪಾಳಿಯ ಕೆಲಸಗಳನ್ನು ಒಳಗೊಂಡಿರುವುದರಿಂದ ಮಹಿಳೆ ಸೂಕ್ತವಲ್ಲ ಎಂದು ಪರಿಗಣಿಸಿರಬಹುದು ಎಂದು ವಾದಿಸಿದರು. ಈ ವಾದವನ್ನು ತೀವ್ರವಾಗಿ ಖಂಡಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್, “ಕೇವಲ ಆಕೆ ಮಹಿಳೆ ಎಂಬ ಕಾರಣಕ್ಕೆ ನೀವು ಕೆಲಸ ನಿರಾಕರಿಸಿದಿರಾ? ಹೆಣ್ಣನ್ನು ದೇವತೆ ಎಂದು ಪೂಜಿಸುವ ಭಾರತ ದೇಶದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ಹೀಗೆ ನಡೆದುಕೊಂಡಿರುವುದು ನಾಚಿಕೆಗೇಡು. ಮನೆಗಳಲ್ಲಿ ನಿತ್ಯವೂ ಸಿಲಿಂಡರ್‌ಗಳನ್ನು ಹೆಣ್ಣುಮಕ್ಕಳೇ ಎತ್ತಿ ಬದಲಾಯಿಸುತ್ತಾರೆ, ಪುರುಷರು ಮನೆಯಲ್ಲಿ ಇಲ್ಲದಿದ್ದಾಗಲೂ ಸಿಲಿಂಡರ್ ಜೋಡಿಸುವ ಕೆಲಸವನ್ನು ಹೆಣ್ಣೇ ಮಾಡುತ್ತಾಳೆ” ಎಂದು ತಪರಾಕಿ ಹಾಕಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಧಾ ಗ್ರಾಮದ ನಿವಾಸಿಯಾಗಿದ್ದ ಈ ಮಹಿಳೆ ಸೇರಿದಂತೆ 49 ಅಭ್ಯರ್ಥಿಗಳನ್ನು ಡೆಪ್ಯೂಟಿ ಕಮಿಷನರ್ ನೇತೃತ್ವದ ಸ್ಥಳೀಯ ಸಮಿತಿಯು ಐಒಸಿಎಲ್‌ನ ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್ ಕೆಲಸಕ್ಕೆ ಶಿಫಾರಸು ಮಾಡಿತ್ತು. ಆಕೆ ಸಂದರ್ಶನಕ್ಕೂ ಹಾಜರಾಗಿದ್ದರು. ಆದರೆ ಇತರ 43 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿದರೂ, ಆಕೆಗೆ ಮಾತ್ರ ಉದ್ಯೋಗ ನಿರಾಕರಿಸಲಾಗಿತ್ತು. ಇದರ ವಿರುದ್ಧ ಆಕೆ ವಿಚಾರಣಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣಾ ನ್ಯಾಯಾಲಯವು ಆಕೆಯ ಪರವಾಗಿ ತೀರ್ಪು ನೀಡಿತ್ತಾದರೂ, ಮೇಲ್ಮನವಿ ನ್ಯಾಯಾಲಯ ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆ ತೀರ್ಪನ್ನು ರದ್ದುಗೊಳಿಸಿ ನೇಮಕಾತಿಯ ಹಕ್ಕು ಇಲ್ಲ ಎಂದು ಹೇಳಿದ್ದವು.

ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಅರ್ಹತೆ ಇದ್ದರೂ ಲಿಂಗ ತಾರತಮ್ಯ ತೋರಿ ಆಕೆಯ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯು ಮಹಿಳೆಗೆ 12 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಪಾವತಿಸಬೇಕೆಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular