ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯಲಿರುವ ಅಂತರಾಷ್ಟ್ರೀಯ ತುಮಕೂರು ಮಹಿಳಾ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಟೂರ್ನಿಮೆಂಟ್‌ನ ಲಾಂಛನವನ್ನು ಕರ್ನಾಟಕದ ಗೃಹ ಸಚಿವ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅನಾವರಣ ಮಾಡಿದರು.
ತುಮಕೂರಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಟೆನಿಸ್ ಕ್ರೀಡಾಂಗಣವನ್ನು ನಿರ್ಮಿಸಿದ ಬಳಿಕ ಇದೇ ಮೊದಲ ಬಾರಿಗೆ ವಿಶ್ವ ಮಟ್ಟದ ಕ್ರೀಡಾಕೂಟ ನಡೆಯಲಿದೆ.
ತುಮಕೂರು ಜಿಲ್ಲಾಡಳಿತ, ತುಮಕೂರು ಟೆನಿಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ ಸಹಕಾರದಲ್ಲಿ ಮೇ 3ರಿಂದ ಮೇ 10ರವರೆಗೆ ಟೂರ್ನಿಮೆಂಟ್ ನಡೆಯಲಿದ್ದು, ವಿಶ್ವಾದ್ಯಂತ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಈ ಕ್ರೀಡಾಕೂಟವು ‘ತುಮಕೂರು ಓಪನ್ ಚಾಂಪಿಯನ್ ಷಿಪ್’ ಎಂದೇ ವಿಶ್ವ ಟೆನಿಸ್ ಭೂಪಟದಲ್ಲಿ ಕರೆಯಲ್ಪಡಲಿದೆ. ಇಲ್ಲಿ ಆಡುವ ಕ್ರೀಡಾಪಟುಗಳು ವಿಜೇತರಾದಲ್ಲಿ 35 ಪಾಯಿಂಟ್ ಗಳನ್ನು ಹಾಗೂ 30 ಸಾವಿರ ಅಮೆರಿಕಾ ಡಾಲರ್‌ಗಳನ್ನು ಗೆಲ್ಲಲಿದ್ದಾರೆ. ಅಲ್ಲದೆ ನಂತರದ ಸ್ಥಾನವನ್ನು ಹೊಂದುವ ಆಟಗಾರರು ಅಂತಾರಾಷ್ಟ್ರೀಯ ರ‍್ಯಾಂಕ್‌ಗಳನ್ನು ಪಡೆಯಲಿದ್ದಾರೆ.
ಈ ಟೂರ್ನಿ ಲಾಂಚನ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಓ ಬಿ.ವಿ.ಆಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ, ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್‌ನ ಪದಾಧಿಕಾರಿ ಅಮರ್ ಉಪಸ್ಥಿತರಿದ್ದರು.

