ಬೆಂಗಳೂರು: ಆಸ್ಟ್ರೇಲಿಯಾದೊಂದಿಗೆ ಕರ್ನಾಟಕದ ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಗಳ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಇಂದು ಐಟಿಬಿಟಿ ಇಲಾಖೆ ಮತ್ತು ಆಸ್ಟ್ರೇಲಿಯಾದ INQ ಇನ್ನೋವೇಶನ್ ಗ್ಲೋಬಲ್ ನಡುವೆ ಪ್ರಸ್ತಾವಿತ ನ್ಯೂ ಸೌತ್ ವೇಲ್ಸ್–ಕರ್ನಾಟಕ ತಂತ್ರಜ್ಞಾನ ಮತ್ತು ನವೋದ್ಯಮ ಸೇತುವೆ ಸ್ಥಾಪಿಸುವ ಕುರಿತು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಈ ಸೇತುವೆಯು ಕರ್ನಾಟಕ ಮತ್ತು ನ್ಯೂ ಸೌತ್ ವೇಲ್ಸ್‌ನಲ್ಲಿರುವ ಸ್ಟಾರ್ಟ್‌ಅಪ್‌ಗಳು, ಹೂಡಿಕೆದಾರರು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಆ್ಯಕ್ಸಿಲರೇಟರ್‌ಗಳು ಹಾಗೂ ಉದ್ಯಮ ವಲಯಗಳನ್ನು ಸಂಪರ್ಕಿಸುವ ವ್ಯವಸ್ಥಿತ ವೇದಿಕೆಯನ್ನು ರೂಪಿಸಲಿದೆ. ಇದರ ಮುಖ್ಯ ಉದ್ದೇಶ ಮಾರುಕಟ್ಟೆ ಪ್ರವೇಶ, ಹೊಸ ಇಕೋ ಸಿಸ್ಟಂ ಸುಗಮವಾಗಿ ಪ್ರವೇಶಿಸಲು ನೆರವು, ಉದ್ಯಮಗಳ ವಿಸ್ತರಣೆಗೆ ಅವಕಾಶಗಳು, ಹೂಡಿಕೆದಾರರ ಸಂಪರ್ಕ, ಸಂಶೋಧನಾ ಸಹಭಾಗಿತ್ವ ಮತ್ತು ಸಂಶೋಧನಾ ಫಲಿತಾಂಶಗಳ ವಾಣಿಜ್ಯೀಕರಣಕ್ಕೆ ಉತ್ತೇಜನ ನೀಡುವುದಾಗಿದೆ.
ಈ ಸಹಭಾಗಿತ್ವದ ಮೂಲಕ ಡೀಪ್‌ಟೆಕ್, AI, ಹೆಲ್ತ್‌ಟೆಕ್, ಅಗ್ರಿಟೆಕ್, ಕ್ಲೀನ್‌ಟೆಕ್, ಬಯೋಟೆಕ್, ಏರೋಸ್ಪೇಸ್, ಕ್ವಾಂಟಮ್ ತಂತ್ರಜ್ಞಾನ ಹಾಗೂ ಡಿಜಿಟಲ್ ಮೂಲಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳನ್ನು ಪರಿಶೋಧಿಸಲಾಗುವುದು.
ನಮ್ಮ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ #GIA ಕಾರ್ಯಕ್ರಮದ ಮೂಲಕ ಆಸ್ಟ್ರೇಲಿಯಾದೊಂದಿಗೆ ಕರ್ನಾಟಕವು ಈಗಾಗಲೇ ಬೆಳೆಸಿಕೊಂಡಿರುವ ಸಹಭಾಗಿತ್ವವನ್ನು ಈ ಒಪ್ಪಂದ ಮತ್ತಷ್ಟು ಬಲಪಡಿಸಲಿದೆ. ಇದರೊಂದಿಗೆ ನಮ್ಮ ಸ್ಟಾರ್ಟ್‌ಅಪ್‌ಗಳು ಮತ್ತು ನವೋದ್ಯಮಿಗಳು ಜಾಗತಿಕ ಮಾರುಕಟ್ಟೆಗಳು, ಬಂಡವಾಳ ಮತ್ತು ಹೊಸ ಸಹಭಾಗಿತ್ವಗಳನ್ನು ತಲುಪಲು ಬಲಿಷ್ಠವಾದ ಸಾಂಸ್ಥಿಕ ಮಾರ್ಗವನ್ನು ನಿರ್ಮಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

