ಬೆಂಗಳೂರು: ಕೆ.ಆರ್.ಐ.ಡಿ.ಎಲ್.ನಲ್ಲಿ ಶೇ.7 ರಷ್ಟು ಜಾಬ್ ಉಳಿತಾಯ ಕಡಿತಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಸುತ್ತೋಲೆ ಹೊರಡಿಸಲಾಗಿದ್ದರೂ, ಪ್ರತಿಪಕ್ಷ ನಾಯಕರು ಕಾಂಗ್ರೆಸ್ ಸರ್ಕಾರ ದೂಷಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕೆ.ಆರ್.ಐ.ಡಿ.ಎಲ್.ನ ಇಬ್ಬರು ಎಂಜಿನಿಯರುಗಳ ಮೇಲೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಆರೋಪ ಮಾಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಷಯ ತಿಳಿದ ಕೂಡಲೇ ತಾವು ಸೂಪರಿಂಟೆಂಡೆಂಟ್ ಎಂಜಿನಿಯರ್ ದರ್ಜೆಯ ಅಧಿಕಾರಿ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಿ, 7 ದಿನಗಳಲ್ಲಿ ವರದಿ ನೀಡಲು ಸೂಚಿಸಿರುವುದಾಗಿ ತಿಳಿಸಿದರು.
ವರದಿಯಲ್ಲಿ ಶಾಸಕರು ಹೆಸರಿಸಿರುವ ಎಂಜಿನಿಯರುಗಳು ಭ್ರಷ್ಟಾಚಾರ ಮಾಡಿರುವುದು ಸಾಬೀತಾದರೆ, ಅಮಾನತು ಮಾಡಿ, ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದ ಅವರು, ತನಿಖಾ ವರದಿ ಬರುವ ಮೊದಲೇ ಪ್ರತಿಪಕ್ಷದ ನಾಯಕರು ಆತುರ ತೋರುತ್ತಿರುವುದು ಹಾಸ್ಯಾಸ್ಪದ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಪಾರದರ್ಶಕ, ಜನಸ್ನೇಹಿ ಮತ್ತು ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂಬುದು ತಮ್ಮ ಆಶಯವಾಗಿದೆ ಎಂದ ಈಶ್ವರ ಖಂಡ್ರೆ, ಯಾವುದೇ ಅಧಿಕಾರಿ, ಸಿಬ್ಬಂದಿ ಸಚಿವರ ಹೆಸರು ಹೇಳಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ಸಾಕ್ಷ್ಯ, ಪುರಾವೆ ಸಹಿತ ದೂರು ಬಂದರೆ ಯಾವ ಮುಲಾಜಿಗೂ ಒಳಗಾಗದೆ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದರು.
ಅಶೋಕ್ ಕುಮಾರ್ ರೈ ಅವರ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ಐ.ಡಿ.ಎಲ್. ಎಂ.ಡಿ. ಸ್ಪಷ್ಟೀಕರಣ ನೀಡಿದ್ದಾರೆ. ಕೆಆರ್.ಐ.ಡಿ.ಎಲ್.ನ 203ನೇ ಆಡಳಿತ ಮಂಡಳಿ ಸಭೆಯಲ್ಲೇ ನಿರ್ಣಯ ಕೈಗೊಂಡು 2021ರ ಆಗಸ್ಟ್ 21ರಂದು ಶೇ.7ರಷ್ಟು ಜಾಬ್ ಉಳಿತಾಯ ಕಡಿತಕ್ಕೆ ಸುತ್ತೋಲೆ ಹೊರಡಿಸಲಾಗಿದೆ. ಆಗ ಯಾರ ಸರ್ಕಾರ ಇತ್ತು, ಯಾರು ಕೆ.ಆರ್.ಐ.ಡಿ.ಎಲ್. ಅಧ್ಯಕ್ಷರಾಗಿದ್ದರು ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.
ಕೆಆರ್.ಐ.ಡಿ.ಎಲ್. ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಯಾಗಿದ್ದು, 203ನೇ ಆಡಳಿತದ ಮಂಡಳಿ ಸಭಾ ನಡಾವಳಿಯಂತೆ ಈ ರೀತಿ ಚಾರ್ಚ್ ಪಡೆಯಲು ಅವಕಾಶ ಇದೆ. ಬಹುಶಃ ಮಾಹಿತಿಯ ಕೊರತೆಯಿಂದ ಶಾಸಕರು ಪತ್ರ ಬರೆದಿರಬಹುದು ಎಂದು ಈಶ್ವರ ಖಂಡ್ರೆ ಹೇಳಿದರು.
ಆದರೂ ಸಚಿವ ಹೆಸರು ಹೇಳಿ ಹಣ ಕೇಳುತ್ತಿದ್ದಾರೆ ಎಂಬ ಗುರುತರ ಆರೋಪ ಬಂದಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ಕೊಟ್ಟಿದ್ದೇನೆ. ತನಿಖಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗವುದು ಎಂದರು.
1998ರಿಂದ 2006ರವರೆಗೆ ಅಶೋಕ್ ಅವರು ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಕಾನೂನು ಬಾಹೀರವಾಗಿ ಅನರ್ಹ ಫಲಾನುಭವಿಗಳಿಗೆ 2500 ಎಕರೆ ಗೋಮಾಳವನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಅಶೋಕ್ ಸೇರಿ 10 ಜನರ ವಿರುದ್ಧ ಎಫ್.ಐ.ಆರ್. ಕೂಡ ದಾಖಲಾಗಿತ್ತು. ಅದಾದ ಬಳಿಕ 2019ರಿಂದ 2023ರವರೆಗೆ ಅವರು ಕಂದಾಯ ಸಚಿವರಾಗಿದ್ದರು. ಆಗ ಅವರು ರಾಜೀನಾಮೆ ಕೊಟ್ಟರೇನು? ಎಂದು ಪ್ರಶ್ನಿಸಿದರು.
ಲೊಟ್ಟೆ ಗೊಲ್ಲಹಳ್ಳಿಯ ಜಮೀನು ಡಿನೋಟಿಫಿಕೇಷನ್ ಗೆ ಸಂಬಂಧಿಸಿದ ಮತ್ತೊಂದು ಆರೋಪವೂ ಅವರ ಮೇಲಿತ್ತು. ರಾಜಕೀಯದಲ್ಲಿ ಆಧಾರ ರಹಿತ ಆರೋಪಗಳೂ ಬರುತ್ತವೆ. ಪ್ರತಿಪಕ್ಷಗಳು ತಾಳ್ಮೆಯಿಂದ ಇರಬೇಕು ಎಂದು ಆರ್. ಅಶೋಕ್ ಅವರಿಗೆ ಕಿವಿಮಾತು ಹೇಳಿದರು.
ಬಿಜೆಪಿ ಕಾರ್ಯಕಾಲದಲ್ಲಿ ಏನೆಲ್ಲಾ ಭ್ರಷ್ಟಾಚಾರ ನಡೆಯಿತು ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಬಿಜೆಪಿಯವರಿಗೆ ಕದ್ದು ಮುಚ್ಚಿ ವ್ಯವಹಾರ ಮಾಡಿ ಅಭ್ಯಾಸವಾಗಿದೆ. ತಮ್ಮಂತೆಯೇ ಇತರರೂ ಭ್ರಷ್ಟಾಚಾರಿಗಳು ಎಂದು ಭಾವಿಸುತ್ತಾರೆ. ಹೀಗಾಗಿ ತಾವು ಮಾಡಿದ ಅವ್ಯವಹಾರವನ್ನೇ ಬೇರೆಯವರೂ ಮಾಡಿದ್ದಾರೆ ಎಂದುಕೊಂಡಿದ್ದಾರೆ. ಪಾಪ ಎಂದು ಈಶ್ವರ ಖಂಡ್ರೆ ವ್ಯಂಗ್ಯವಾಡಿದರು.
ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಆರೋಪ ಮಾಡಲು ಬೇರೆ ವಿಷಯವಿಲ್ಲ. ನಾನು ತಕ್ಷಣವೇ ತನಿಖೆಗೆ ಆದೇಶ ಕೊಟ್ಟ ಮೇಲೂ ಈ ರೀತಿ ಆರೋಪ ಮಾಡುವುದು ಪ್ರತಿಪಕ್ಷ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಬಸವರಾಜ ಕನ್ನಾಳೆಯೊಂದಿಗಿನ ವೈರಲ್ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಈಶ್ವರ ಖಂಡ್ರೆ: ನನ್ನ ವಿರುದ್ಧವೇ ಆತ ಸ್ಪರ್ಧೆಗೆ ತಯಾರಿ ನಡೆಸಿದ್ದ ಎಂದು ಮಾಹಿತಿ
ಬೆಂಗಳೂರು: ಕೆಪಿಎಸ್.ಸಿ ನೇಮಕಾತಿ ಹಗರಣದಲ್ಲಿ ಬಂಧಿತನಾಗಿರುವ ಬಸವರಾಜ ಕನ್ನಾಳೆ ಜೊತೆಗಿನ ವೈರಲ್ ಫೋಟೋ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ. ಆತ ತಾನು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿ ಆಯ್ಕೆಯಾಗಿದ್ದು, ಆಶೀರ್ವಾದ ಮಾಡಿ ಎಂದು ನನ್ನನ್ನು ಭೇಟಿಯಾಗಿದ್ದ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಬಸವರಾಜ್ ಕನ್ನಾಳೆ ಭಾಲ್ಕಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತನಾಗಿದ್ದು, ತಮ್ಮ ವಿರುದ್ಧವೇ ಸ್ಪರ್ಧೆಗೆ ತಯಾರಿ ನಡೆಸಿದ್ದ ಎಂದು ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ನನ್ನ ಕಚೇರಿಗೆ ಬಂದಿದ್ದ ಕನ್ನಾಳೆ, ಬಿಜೆಪಿ ರಾಜ್ಯ ನಾಯಕರ ಶಿಫಾರಸಿನಿಂದ ಘನತೆವೆತ್ತ ರಾಜ್ಯಪಾಲರು ತನ್ನನ್ನು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನನ್ನಾಗಿ ನಾಮಕರಣ ಮಾಡಿದ್ದಾರೆ. ಆಶೀರ್ವಾದ ಮಾಡಿ ಎಂದು ಹೇಳಿ ಸಿಹಿ ತಿನಿಸಲು ಬಂದ, ನಾನು ಸಿಹಿ ತಿನ್ನುವುದಿಲ್ಲ, ನೀನೆ ತಿನ್ನಪ್ಪ ಎಂದು ಹೇಳಿ ಸಿಹಿ ತಿನ್ನಿಸಿದ್ದೆ ಎಂದು ವೈರಲ್ ಫೋಟೋ ಬಗ್ಗೆ ಸ್ಪಷ್ಟೀಕರಣ ನೀಡಿದರು.
ಯಾವ ಬಿಜೆಪಿ ನಾಯಕರು ಇವರಿಗೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರು ಯಾವ ಮಾನದಂಡದಲ್ಲಿ ಕನ್ನಾಳೆಯನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿ ಮಾಡಿದರು ಎಂಬ ಬಗ್ಗೆಯೂ ಬಿಜೆಪಿ, ಜೆಡಿಎಸ್ ನಾಯಕರು ಮಾತನಾಡಲಿ ಎಂದರು.
ಭಾಲ್ಕಿಯಿಂದ ನನ್ನ ವಿರುದ್ಧವೇ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸುವುದಾಗಿ ನನಗೆ ಕನ್ನಾಳೆ ಹೇಳಿದ್ದು, ನಾನು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇದೆ. ಪ್ರಯತ್ನ ಮಾಡು ಎಂದು ಹೇಳಿದ್ದೆ ಎಂದು ತಿಳಿಸಿದರು.
ನನ್ನ ಮತ ಕ್ಷೇತ್ರದ ಒಬ್ಬ ಯುವಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದೇನೆ. ಆಶೀರ್ವಾದ ಮಾಡಿ ಎಂದ ಬಂದಾಗ ಶುಭಕೋರುವುದು ಸಹಜ. ನಿತ್ಯ ನೂರಾರು ಜನ ಬರುತ್ತಾರೆ. ಫೋಟೋ ತೆಗೆಸಿಕೊಳ್ಳುತ್ತಾರೆ. ಇಂತಹ ಚಿತ್ರವನ್ನೇ ಹಿಡಿದುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಈ ರೀತಿ ವಂಚನೆ ಮಾಡೋರು ಎಲ್ಲ ಪಕ್ಷದ ನಾಯಕರ ಜೊತೇನೂ ಫೋಟೋ ತೆಗೆಸಿಕೊಳ್ಳುತ್ತಾರೆ. ಕನ್ನಾಳೆ, ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಜೊತೆ ವಿದೇಶದಲ್ಲಿ ಫೋಟೋ ತೆಗೆಸಿಕೊಂಡಿದ್ದಾನೆ. ಆತ ನಡೆಸುತ್ತಿದ್ದ ಟ್ರಾವಲ್ಸ್ ಬಸ್ ಅನ್ನು ಜೆಡಿಎಸ್ ಶಾಸಕರೂ ಉದ್ಘಾಟನೆ ಮಾಡಿದ್ದಾರೆ. ಬಿಜೆಪಿಯ ಚಿಹ್ನೆ ಇರುವ ಶಲ್ಯ ಹೊದ್ದು, ಬಿಜೆಪಿ ನಾಯಕರ ಜೊತೆ ಕನ್ನಾಳೆ ಕುಳಿತಿರುವ, ಬಿಜೆಪಿಯ ಹಲವು ನಾಯಕರು ಕನ್ನಾಳಗೆ ಸಿಹಿ ತಿನ್ನಿಸುತ್ತಿರುವ ಚಿತ್ರಗಳೂ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ನನ್ನ ಫೋಟೋ ಒಂದು ಹಿಡಿದುಕೊಂಡು ಬಿಜೆಪಿ ಮತ್ತು ಜೆಡಿಎಸ್ ನವರು ರಾಜಕೀಯ ಮಾಡುವುದು ಸರ್ವಥಾ ಸರಿಯಲ್ಲ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕೂಟದವರು ತಾವು ಮಾಡಿರುವ ಪಾಪವನ್ನು ಕಾಂಗ್ರೆಸ್ ಹೆಗಲಿಗೆ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಕೋತಿ ಮೊಸರನ್ನ ತಿಂದು ಮೇಕೆಯ ಬಾಯಿಗೆ ಒರೆಸಿತು ಎನ್ನುವ ಗಾದೆಯಂತೆ ವರ್ತಿಸುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದರು.
ನಮ್ಮ ಸರ್ಕಾರ ಕೆ.ಪಿ.ಎಸ್.ಸಿ.ಯ ಎಲ್ಲ ಹಗರಣದ ಬಗ್ಗೆ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುತ್ತದೆ. ಇಡೀ ಪ್ರಕರಣದ ಬಗ್ಗೆ ಹಾಗೂ ಪ್ರಕರಣದಲ್ಲಿ ಶಾಮೀಲಾಗಿರುವವರ ಬಗ್ಗೆ ಸಮಗ್ರ ಹಾಗೂ ಪಾರದರ್ಶಕವಾಗಿ ತನಿಖೆ ಆಗಲಿದೆ. ಈ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳ ಬಗ್ಗೆ ತನಿಖೆ ಮಾಡಿಸುತ್ತಿದೆ. ಹಾಲು ಯಾವುದು, ನೀರು ಯಾವುದು ಎಂಬುದು ಬಹಿರಂಗವಾಗೇ ಆಗುತ್ತದೆ. ಯಾರ ಚರಿತ್ರೆ ಏನು ಎಂಬುದು ಜನರಿಗೂ ತಿಳಿಯತ್ತೆ ಎಂದು ಹೇಳಿದರು.

