ಬೆಂಗಳೂರು: ಜೈಪುರದಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ತುರ್ತು ನಿರ್ಗಮನದ ಡೋರ್ ತೆರೆಯಲು ಯತ್ನಿಸಿ ಅವಾಂತರ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ಬುದ್ಧಿವಾದ ಹೇಳಿ ಬಿಟ್ಟು ಕಳುಹಿಸಿದ ಏರ್ ಪೋರ್ಟ್ ಪೊಲೀಸರ ವಿರುದ್ಧವೇ ಆತ ನಾಲಿಗೆ ಹರಿಬಿಟ್ಟಿರುವ ಘಟನೆ ನಡೆದಿದೆ.
ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿ ಆತಂಕ ಸೃಷ್ಟಿಸಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬನನ್ನು, ಬುದ್ಧಿಹೇಳಿ ಬಿಟ್ಟು ಕಳುಹಿಸಿದ ಬೆಂಗಳೂರು ಏರ್ಪೋರ್ಟ್ ಪೊಲೀಸರ ವಿರುದ್ಧವೇ ಆತ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸದ್ಯ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಚಾತುರ್ಯದಿಂದ ತಪ್ಪು ಮಾಡಿರಬಹುದು ಎಂದು ಬೆಂಗಳೂರು ಏರ್ಪೋರ್ಟ್ ಪೊಲೀಸರು ಆತನ ವಿರುದ್ಧ ಎನ್‌ಸಿಆರ್ ಅಥವಾ ಗಂಭೀರವಲ್ಲದ ಪ್ರಕರಣ ದಾಖಲಿಸಿ ಬಿಟ್ಟು ಕಳುಹಿಸಿದ್ದರು. ಆದರೆ, ಠಾಣೆಯಿಂದ ಹೊರಬರುತ್ತಿದ್ದಂತೆಯೇ ಆತ ಮತ್ತೆ ತನ್ನ ಅಸಲಿ ಮುಖ ಪ್ರದರ್ಶಿಸಿ ಪೊಲೀಸ್ ಸಿಬ್ಬಂದಿಯನ್ನೇ ನಿಂದಿಸಿದ್ದಾನೆ.
ಇಷ್ಟಕ್ಕೂ ನಡೆದಿದ್ದೇನು? ಎಂದು ನೋಡುವುದಾದರೆ ಮಾರ್ಚ್ 22ರಂದು ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಉತ್ಕರ್ಷ್ ಗೌತಮ್ ಎಂಬ ಪ್ರಯಾಣಿಕ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ. ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಏರ್‌ಲೈನ್ಸ್ ಸಿಬ್ಬಂದಿ ಈತನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಕ್ದಾಣದ ಪೊಲೀಸರ ವಶಕ್ಕೆ ನೀಡಿದ್ದರು. ಪೊಲೀಸರು ವಿಚಾರಣೆ ನಡೆಸಿ, ಆರೋಪಿಗೆ ಬುದ್ಧಿವಾದ ಹೇಳಿ ಎನ್‌ಸಿಆರ್ ದಾಖಲಿಸಿ ಕಳುಹಿಸಿದ್ದರು.
ಪೊಲೀಸ್ ಠಾಣೆಯಿಂದ ಹೊರಬಂದ ಬೆನ್ನಲ್ಲೇ ಆರೋಪಿ ಉತ್ಕರ್ಷ್ ತನ್ನ ಎಕ್ಸ್ ಖಾತೆಯಲ್ಲಿ ಬೆಂಗಳೂರು ಪೊಲೀಸರನ್ನು ನಿಂದಿಸಿದ್ದಾನೆ. ‘Mumbai Police please Arrest @ Blr City Police Bustards’ ಎಂದು ಟ್ವೀಟ್ ಮಾಡಿದ್ದಲ್ಲದೆ, ಪೊಲೀಸರು ತನ್ನನ್ನು 4 ಗಂಟೆಗಳ ಕಾಲ ಸೆಲ್‌ನಲ್ಲಿ ಕೂರಿಸಿ ಹಿಂಸೆ ನೀಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾನೆ.
ಟ್ವೀಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತನ್ನೆಲ್ಲಾ ಟ್ವೀಟ್ ಡಿಲೀಟ್ ಮಾಡಿ ತಲೆಮರೆಸಿಕೊಂಡಿದ್ದಾನೆ.

