ಅಬುಧಾಬಿ: ಯುಎಇ ನ ಅಬುಧಾಬಿಯಲ್ಲಿ ವಾಸವಾಗಿರುವ ಭಾರತೀಯ ಮೂಲದ 29 ವರ್ಷದ ಯುವಕನೊಬ್ಬ ಲಾಟರಿಯಲ್ಲಿ 240 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ತಮ್ಮ ತಾಯಿಯ ಜನ್ಮ ದಿನಾಂಕದ ಸಂಖ್ಯೆ ಇದ್ದ ಲಾಟರಿ ಟಿಕೆಟ್ ಖರೀದಿಸಿದ ಭಾರತೀಯ ಮೂಲದ ಅನಿಲ್ ಕುಮಾರ್ ಅವರಿಗೆ 240 ಕೋಟಿ ರೂಪಾಯಿ ಬಹುಮಾನ ಬಂದಿದೆ. ಇಷ್ಟು ಮೊತ್ತದ ಚೆಕ್ ಹಸ್ತಾಂತರಿಸಿ ಅವರನ್ನು ಸಂದರ್ಶನ ಮಾಡಿದ ವಿಡಿಯೋ ಯುಎಇ ಲಾಟರಿ ಹಂಚಿಕೊಂಡಿದೆ.
ಇಷ್ಟು ದೊಡ್ಡ ಮೊತ್ತದ ಲಾಟರಿ ಗೆದ್ದಿರುವುದು ಖುಷಿ ತಂದಿದೆ. ಸರಿಯಾದ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ಕುಟುಂಬ ಇಲ್ಲಿಗೆ ಕರೆತಂದು ಜೀವನಪೂರ್ತಿ ಅವರೊಂದಿಗೆ ಇಲ್ಲೇ ನೆಲೆಸಬೇಕು ಎನ್ನುವ ಹಂಬಲವಿದೆ. ಗೆದ್ದ ಹಣದ ಒಂದು ಭಾಗವನ್ನು ದಾನ ಮಾಡುತ್ತೇನೆ. ಸೂಪರ್ ಕಾರ್ ಖರೀದಿಸಿ ಐಷಾರಾಮಿ ಹೋಟೆಲ್ ನಲ್ಲಿ ಮೋಜು ಮಾಡಬೇಕೆಂದಿದ್ದೇನೆ ಎಂದು ಅನಿಲ್ ಸಂತಸ ಹಂಚಿಕೊಂಡಿದ್ದಾರೆ.

