HomeEntertainmentದೇಶದಲ್ಲೇ ನಂ.1 ನಾಯಕಿ ರಶ್ಮಿಕಾ ಮಂದಣ್ಣ; ‘ಇಂಡಿಯಾ ಟುಡೇ’ ನಿಯತಕಾಲಿಕೆ ಮೆಚ್ಚುಗೆ

ದೇಶದಲ್ಲೇ ನಂ.1 ನಾಯಕಿ ರಶ್ಮಿಕಾ ಮಂದಣ್ಣ; ‘ಇಂಡಿಯಾ ಟುಡೇ’ ನಿಯತಕಾಲಿಕೆ ಮೆಚ್ಚುಗೆ

ಖ್ಯಾತ ರಾಷ್ಟ್ರೀಯ ನಿಯತಕಾಲಿಕೆ ‘ಇಂಡಿಯಾ ಟುಡೇ’ ದೇಶದ ಟಾಪ್ ನಾಯಕಿಯರ ಪಟ್ಟಿಯನ್ನು ಪ್ರಕಟಿಸಿದ್ದು, ನಟಿ ರಶ್ಮಿಕಾ ಮಂದಣ್ಣ ಅವರನ್ನು ಭಾರತದ ನಂ.1 ನಾಯಕಿ ಎಂದು ಗುರುತಿಸಿದೆ.

ರಶ್ಮಿಕಾ ಅವರನ್ನು ‘ದಿ ನ್ಯೂ ನ್ಯಾಷನಲ್ ಸ್ಟಾರ್’ ಎಂದು ಬಣ್ಣಿಸಿರುವ ‘ಇಂಡಿಯಾ ಟುಡೇ’, ‘ಪುಷ್ಪ: ದಿ ರೈಸ್’, ‘ಅನಿಮಲ್’, ‘ಪುಷ್ಪ-2: ದಿ ರೂಲ್’, ‘ಛಾವಾ’ ಸೇರಿದಂತೆ ಸತತ ಪ್ಯಾನ್-ಇಂಡಿಯಾ ಹಿಟ್‌ ಸಿನಿಮಾಗಳ ಮೂಲಕ ಅವರು ಬಾಲಿವುಡ್‌ನಿಂದ ದಕ್ಷಿಣ ಭಾರತದವರೆಗೆ ಅಪಾರ ಜನಪ್ರಿಯತೆ ಹಾಗೂ ಮಾರುಕಟ್ಟೆ ಕ್ರೇಜ್‌ ಗಳಿಸಿದ್ದಾರೆ ಎಂದು ಹೇಳಿದೆ.

ದೇಶಾದ್ಯಂತ ಜನಪ್ರಿಯವಾಗಿರುವ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಆಲಿಯಾ ಭಟ್ ಹಾಗೂ ಸಾಯಿ ಪಲ್ಲವಿ ಅವರನ್ನೂ ಹಿಂದಿಕ್ಕಿ ರಶ್ಮಿಕಾ ಅಗ್ರಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ. ಇದು ಅವರ ಪ್ಯಾನ್-ಇಂಡಿಯಾ ಇಮೇಜ್‌ಗೆ ಮತ್ತೊಂದು ದೊಡ್ಡ ಹೆಗ್ಗಳಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಪೀಕ್ ಸ್ಟಫ್, ನಿನ್ನ ಬಗ್ಗೆ ಹೆಮ್ಮೆಯಿದೆ’ ಎಂದ ವಿಜಯ್ ದೇವರಕೊಂಡ

‘ಇಂಡಿಯಾ ಟುಡೇ’ ನಿಯತಕಾಲಿಕೆಯ ಕವರ್‌ ಪೇಜ್‌ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ವಿಜಯ್ ದೇವರಕೊಂಡ, ರಶ್ಮಿಕಾ ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

“ಇದು ಪೀಕ್ ಸ್ಟಫ್.. ನಿನ್ನನ್ನು ನೋಡಿದರೆ ತುಂಬಾ ಹೆಮ್ಮೆ ಎನಿಸುತ್ತದೆ” ಎಂದು ವಿಜಯ್ ದೇವರಕೊಂಡ ಪೋಸ್ಟ್‌ ಮಾಡಿದ್ದಾರೆ. ಅವರ ಈ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಶ್ಮಿಕಾ ಅವರ ಈ ಸಾಧನೆಗೆ ಟಾಲಿವುಡ್, ಬಾಲಿವುಡ್‌ನ ಹಲವು ಸಿನಿತಾರೆಯರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಶ್ಮಿಕಾ, ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ.

ರಶ್ಮಿಕಾ ಮಂದಣ್ಣ ಇಂದು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲೂ ಜನಪ್ರಿಯವಾಗಿರುವ ಪ್ಯಾನ್-ಇಂಡಿಯಾ ನಟಿ. ಆದರೆ ಅವರ ಸಿನಿ ಪಯಣ ಆರಂಭವಾಗಿದ್ದು ಕರ್ನಾಟಕದ ಕೊಡಗಿನಿಂದ.

ಕೊಡಗಿನಲ್ಲಿ ಜನನ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ

ರಶ್ಮಿಕಾ ಮಂದಣ್ಣ ಅವರು 1996ರ ಏಪ್ರಿಲ್ 5ರಂದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಸುಮನ ಮತ್ತು ಮದನ್ ಮಂದಣ್ಣ ದಂಪತಿಯ ಪುತ್ರಿಯಾಗಿ ಜನಿಸಿದರು. ಕೊಡವ ಕುಟುಂಬದಲ್ಲಿ ಬೆಳೆದ ಅವರು ಕೊಡಗು ಜಿಲ್ಲೆಯ ಕೂರ್ಗ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದರು. ನಂತರ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಸೈಕಾಲಜಿ, ಜರ್ನಲಿಸಂ ಮತ್ತು ಇಂಗ್ಲಿಷ್ ಲಿಟರೇಚರ್‌ನಲ್ಲಿ ಪದವಿ ವ್ಯಾಸಂಗ ಮಾಡಿದರು.

ಮಾಡೆಲಿಂಗ್ ಮೂಲಕ ಆರಂಭ

ಕಾಲೇಜಿನಲ್ಲಿ ಓದುತ್ತಿರುವಾಗಲೇ ರಶ್ಮಿಕಾ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. 2014ರಲ್ಲಿ Clean & Clear Times Fresh Face ಪ್ರಶಸ್ತಿ ಗೆದ್ದರು. ಬಳಿಕ 2015ರಲ್ಲಿ La Mode Bangalore’s Top Model Hunt ಪ್ರಶಸ್ತಿಯನ್ನೂ ಪಡೆದರು. ಮಾಡೆಲಿಂಗ್‌ ಮೂಲಕವೇ ಅವರ ಮೇಲೆ ಚಿತ್ರರಂಗದವರ ಗಮನ ಸೆಳೆಯಿತು.

‘ಕಿರಿಕ್ ಪಾರ್ಟಿ’ಯಿಂದ ಸಿನಿ ಎಂಟ್ರಿ

ರಶ್ಮಿಕಾ ಅವರ ನಟನಾ ಪಯಣ 2016ರಲ್ಲಿ ಬಿಡುಗಡೆಯಾದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಆರಂಭವಾಯಿತು. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿಸಿದ ರಶ್ಮಿಕಾ, ಸಾನ್ವಿ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದರು. ಈ ಚಿತ್ರದ ಅಭಿನಯಕ್ಕಾಗಿ ಅವರಿಗೆ SIIMA ಪ್ರಶಸ್ತಿಯೂ ದೊರೆಯಿತು.

ಕನ್ನಡದಿಂದ ತೆಲುಗು ಚಿತ್ರರಂಗಕ್ಕೆ

‘ಕಿರಿಕ್ ಪಾರ್ಟಿ’ ಯಶಸ್ಸಿನ ಬಳಿಕ ‘ಅಂಜನಿಪುತ್ರ’ ಮತ್ತು ‘ಚಮಕ್’ ಚಿತ್ರಗಳಲ್ಲಿ ನಟಿಸಿದರು. 2018ರಲ್ಲಿ ‘ಚಲೋ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಅದೇ ವರ್ಷ ಬಿಡುಗಡೆಯಾದ ‘ಗೀತಾ ಗೋವಿಂದಂ’ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ವಿಜಯ್ ದೇವರಕೊಂಡ ಜೊತೆಗಿನ ಈ ಚಿತ್ರದ ಜೋಡಿ ಪ್ರೇಕ್ಷಕರಲ್ಲಿ ಭಾರೀ ಜನಪ್ರಿಯತೆ ಗಳಿಸಿತು.

ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದ ರಶ್ಮಿಕಾ

ನಂತರ ‘ಸರಿಲೇರು ನೀಕೆವ್ವರು’, ‘ಭೀಷ್ಮ’, ‘ಪುಷ್ಪ: ದಿ ರೈಸ್’, ‘ಸೀತಾ ರಾಮಂ’, ‘ವಾರಿಸು’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು. ‘ಪುಷ್ಪ’ ಸರಣಿಯ ಶ್ರೀವಲ್ಲಿ ಪಾತ್ರ ರಶ್ಮಿಕಾಗೆ ದೇಶಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಹಿಂದಿ ಚಿತ್ರರಂಗದಲ್ಲೂ ‘ಗುಡ್‌ಬೈ’ ಮೂಲಕ ಪ್ರವೇಶಿಸಿ, ಬಳಿಕ ‘ಅನಿಮಲ್’ ಚಿತ್ರದ ಮೂಲಕ ಮತ್ತಷ್ಟು ಗಮನ ಸೆಳೆದರು.

‘ನ್ಯಾಷನಲ್ ಕ್ರಶ್’ ಎಂಬ ಜನಪ್ರಿಯ ಹೆಸರು

ಕನ್ನಡ ಚಿತ್ರರಂಗದಿಂದ ಆರಂಭವಾದ ರಶ್ಮಿಕಾ ಅವರ ಪಯಣ ಇಂದು ಬಹುಭಾಷಾ ಚಿತ್ರರಂಗದ ಪ್ರಮುಖ ನಟಿಯರ ಸಾಲಿಗೆ ತಂದು ನಿಲ್ಲಿಸಿದೆ. ಅವರ ಜನಪ್ರಿಯತೆಯಿಂದಾಗಿ ಮಾಧ್ಯಮಗಳಲ್ಲಿ ಅವರನ್ನು ‘ನ್ಯಾಷನಲ್ ಕ್ರಶ್’ ಎಂದೂ ಕರೆಯಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular