ಇಂಡಿಯಾ ಪೋಸ್ಟ್ (India Post) ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ‘ಉಡುಗೊರೆ’ (Gifts) ನೀಡುವ ಸಂದೇಶಗಳು ಸಂಪೂರ್ಣ ನಕಲಿ ಎಂದು ಪಿಐಬಿ (PIB) ಎಚ್ಚರಿಸಿದೆ. ಆಕರ್ಷಕ ಉಡುಗೊರೆಗಳ ಆಮಿಷ ತೋರಿಸಿ, ಲಿಂಕ್ ಕ್ಲಿಕ್ ಮಾಡುವಂತೆ ಪ್ರೇರೇಪಿಸಿ ಸೈಬರ್ ವಂಚಕರು ಜನರ ವೈಯಕ್ತಿಕ ವಿವರಗಳು, ಆಧಾರ್ ಮತ್ತು ಬ್ಯಾಂಕ್ ಮಾಹಿತಿಯನ್ನು ಕದಿಯುತ್ತಿದ್ದಾರೆ. ಇಂತಹ ನಕಲಿ ಜಾಹೀರಾತುಗಳನ್ನು ನಂಬಬೇಡಿ ಮತ್ತು ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
ಸಾಮಾಜಿಕ ಜಾಲತಾಣಗಳಲ್ಲಿ ‘ಇಂಡಿಯಾ ಪೋಸ್ಟ್ – ಡಾಕ್ ಸೇವಾ ಗಿಫ್ಟ್ಸ್’ ಹೆಸರಿನಲ್ಲಿ ಸಂದೇಶವೊಂದು ವೇಗವಾಗಿ ಹರಡುತ್ತಿದೆ. ಆ ಸಂದೇಶದಲ್ಲಿ ನೀಡಲಾದ ಲಿಂಕ್ ಕ್ಲಿಕ್ ಮಾಡಿದರೆ ವಿಶೇಷ ಉಡುಗೊರೆಗಳು ಮತ್ತು ರಿವಾರ್ಡ್‌ಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ. ಆದರೆ, ಇದು ಸಂಪೂರ್ಣವಾಗಿ ಸುಳ್ಳು ಪ್ರಚಾರ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ವಿಭಾಗವು ಎಚ್ಚರಿಕೆ ನೀಡಿದ್ದು, ಈ ಸಂದೇಶಗಳಿಗೂ ಇಂಡಿಯಾ ಪೋಸ್ಟ್ ಅಥವಾ ಅಂಚೆ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ. ಜನರನ್ನು ವಂಚಿಸಲು ಸೈಬರ್ ಕ್ರಿಮಿನಲ್‌ಗಳು ಇಂತಹ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಹೇಳಿದೆ.
ವಂಚನೆ ನಡೆಯುವುದು ಹೇಗೆ ?: ಅಧಿಕಾರಿಗಳ ಪ್ರಕಾರ, ಉಡುಗೊರೆಗಳ ಹೆಸರಿನಲ್ಲಿ ಕಳುಹಿಸುವ ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಅಪಾಯವಿದೆ. ವಿಶೇಷವಾಗಿ ಆಧಾರ್ ವಿವರಗಳು, ಒಟಿಪಿ (OTP) ಮತ್ತು ಬ್ಯಾಂಕ್ ಖಾತೆಯ ಮಾಹಿತಿಯಂತಹ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸಲು ಸೈಬರ್ ಕಳ್ಳರು ಇಂತಹ ಮಾರ್ಗಗಳನ್ನು ಅನುಸರಿಸುತ್ತಾರೆ. ಆದ್ದರಿಂದ, ಅನುಮಾನಾಸ್ಪದವಾಗಿ ಕಾಣುವ ಲಿಂಕ್‌ಗಳು ಅಥವಾ ವೆಬ್ ಪೇಜ್‌ಗಳನ್ನು ಕ್ಲಿಕ್ ಮಾಡದಂತೆ ಪಿಐಬಿ ಸೂಚಿಸಿದೆ.
ಯಾವುದೇ ಆಫರ್ ಅಥವಾ ಯೋಜನೆಗಳ ಬಗ್ಗೆ ಸಂದೇಹವಿದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಮಾತ್ರ ಭೇಟಿ ನೀಡಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಸಾರ್ವಜನಿಕರು ಜಾಗರೂಕರಾಗಿದ್ದರೆ ಇಂತಹ ಸೈಬರ್ ವಂಚನೆಗಳಿಂದ ರಕ್ಷಣೆ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.

