ವಿಜಯಪುರ: ಪಂಚ ರಾಜ್ಯ ಚುನಾವಣೆ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ ಎಂದು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಮಹಮ್ಮದ್ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮತ್ತು ರಾಜ್ಯದಲ್ಲಿ ಉಪಚುನಾವಣೆಯ ನಂತರ ಸಂಪುಟ ವಿಸ್ತರಣೆಯಾಗಲಿದೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಮೇ ಅಥವಾ ಜೂನ್ ನಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂದು ಅವರು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ವೇಳೆ ಈಗಿರುವ ಶೇಕಡ 50ರಷ್ಟು ಸಚಿವರನ್ನು ಕೈಬಿಟ್ಟು ಅವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಲು ಮತ್ತು ಶೇಕಡ 50ರಷ್ಟು ಹೊಸಬರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವನ್ನು ಪಕ್ಷದ ನಾಯಕರ ಗಮನಕ್ಕೆ ತರಲಾಗಿದೆ. ಹೈಕಮಾಂಡ್ ಕೂಡ ಈ ಬಗ್ಗೆ ಒಲವು ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ನಾವು ಯಾರು ಕೂಡ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಕಾರ್ಯಾಧ್ಯಕ್ಷನಾಗಿ ನನ್ನ ಪಾಲು ಕೂಡ ಇದೆ. ಅಂದು ನನ್ನ ಜೊತೆ ಕಾರ್ಯಾಧ್ಯಕ್ಷರಾಗಿದ್ದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಅವರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೂ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

