ಪ್ರಸ್ತುತ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನಾಡುತ್ತಿದೆ. ಮೊದಲ ಪಂದ್ಯ ಡ್ರಾ, ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದ ಕಾರಣ ನಾಲ್ಕನೇ ಹಾಗೂ ಐದನೇ ಪಂದ್ಯವನ್ನು ಗೆದ್ದು ಭಾರತ ಸರಣಿ ಡ್ರಾ ಮಾಡಿಕೊಂಡು ಮಾನ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿತ್ತು.
ಆದರೆ ನಿನ್ನೆ ( ಜುಲೈ 9 ) ಬ್ರಿಸ್ಟೋಲ್‌ನ ಕಂಟ್ರಿ ಗ್ರೌಂಡ್‌ನಲ್ಲಿ ನಡೆದ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನ್ನು ಕಾಣುವ ಮೂಲಕ ಸರಣಿಯನ್ನು ಕೈಚೆಲ್ಲಿ ಮುಖಭಂಗಕ್ಕೊಳಗಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿ ಇಂಗ್ಲೆಂಡ್‌ಗೆ 159 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಇಂಗ್ಲೆಂಡ್ 13.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ 9 ವಿಕೆಟ್‌ಗಳ ಅಬ್ಬರದ ಗೆಲುವು ಸಾಧಿಸಿತು.
ಟೀಮ್ ಇಂಡಿಯಾ ಇನ್ನಿಂಗ್ಸ್: ತಂಡದ ಪರ ನಾಯಕ ಶ್ರೇಯಸ್ ಐಯ್ಯರ್ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್ ಸಹ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ವೈಭವ್ ಸೂರ್ಯವಂಶಿ 15 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ 16 ರನ್ ಗಳಿಸಿದರು. ಇನ್ನುಳಿದಂತೆ ಇಶಾನ್ ಕಿಶನ್ 4, ಶಿವಮ್ ದುಬೆ 22, ತಿಲಕ್ ವರ್ಮಾ 11, ವಾಷಿಂಗ್ಟನ್ ಸುಂದರ್ 5, ಅಕ್ಸರ್ ಪಟೇಲ್ 1 ಹಾಗೂ ಶ್ರೇಯಸ್ ಐಯ್ಯರ್ 49 ಎಸೆತಗಳಲ್ಲಿ ಅಜೇಯ 80 ರನ್ ಬಾರಿಸಿದರು.
ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಹಾಗೂ ಜೋಶ್ ಟಂಗ್ ತಲಾ ಎರಡು ವಿಕೆಟ್ ಪಡೆದರೆ, ವಿಲ್ ಜಾಕ್ಸ್ ಹಾಗೂ ಆದಿಲ್ ರಶೀದ್ ತಲಾ ಒಂದೊಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಇನ್ನಿಂಗ್ಸ್: ತಂಡದ ಪರ ಜೋಶ್ ಬಟ್ಲರ್ 8 ರನ್ ಗಳಿಸಿ ಔಟ್ ಆದರೆ, ಫಿಲ್ ಸಾಲ್ಟ್ 42 ಎಸೆತಗಳಲ್ಲಿ ಅಜೇಯ 59 ಹಾಗೂ ಹ್ಯಾರಿ ಬ್ರೂಕ್ 35 ಎಸೆತಗಳಲ್ಲಿ ಅಜೇಯ 79 ರನ್ ಬಾರಿಸಿ ಅಬ್ಬರಿಸಿದರು.
ಭಾರತದ ಪರ ಅರ್ಷ್‌ದೀಪ್ ಸಿಂಗ್ ಒಂದು ವಿಕೆಟ್ ಪಡೆದರು.

