ಬೆಂಗಳೂರು: ಬೆಂಗಳೂರಿನ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದ್ದಾರೆ. ಯಾರು ಏನೇ ಟೀಕೆ ಮಾಡಿದರೂ ಸಾರ್ವಜನಿಕರ ಸುರಕ್ಷತೆ ಮತ್ತು ನಗರ ಸುಂದರೀಕರಣದ ದೃಷ್ಟಿಯಿಂದ ಪ್ರಮುಖ ರಸ್ತೆಗಳಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದರು.
ಗುರುವಾರ ಬಿಬಿಎಂಪಿ ಕಚೇರಿಯಲ್ಲಿ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಗರದ ಒಟ್ಟು ರಸ್ತೆಗಳಲ್ಲಿ ಕೇವಲ ಶೇ.10ರಷ್ಟು ಪ್ರಮುಖ ರಸ್ತೆಗಳಲ್ಲಿ ಮಾತ್ರ ಒತ್ತುವರಿ ತೆರವು ಮಾಡಲಾಗುತ್ತಿದೆ. ಉಳಿದ ಶೇ.90ರಷ್ಟು ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಮುಂದುವರಿಸಬಹುದು ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ
ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸಿ, ಅರ್ಹ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ತಮ್ಮ ವಿರುದ್ಧ ಕೆಲವರು ಮಿತಿ ಮೀರಿ ಟೀಕೆ ಮಾಡುತ್ತಿರುವುದನ್ನು ಉಲ್ಲೇಖಿಸಿದ ಸಚಿವರು, “ಬೆಂಗಳೂರು ಸುಂದರವಾಗಿರಲು ಎಲ್ಲ ಟೀಕೆಗಳನ್ನೂ ಸಹಿಸಿಕೊಳ್ಳುತ್ತೇನೆ. ಟೀಕೆ ಭಯದಿಂದ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಮೂರು ವರ್ಷಗಳಲ್ಲಿ 900ಕ್ಕೂ ಹೆಚ್ಚು ಪಾದಚಾರಿಗಳ ಸಾವು
ಪಾದಚಾರಿ ಮಾರ್ಗಗಳ ಒತ್ತುವರಿಯಿಂದ ಉಂಟಾಗುತ್ತಿರುವ ಅಪಾಯವನ್ನು ವಿವರಿಸಿದ ಸಚಿವರು, ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ 900ಕ್ಕೂ ಹೆಚ್ಚು ಪಾದಚಾರಿಗಳು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ಸಾರ್ವಜನಿಕರ ಜೀವ ರಕ್ಷಣೆ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅದಕ್ಕಾಗಿ ಈ ಕಾರ್ಯಾಚರಣೆ ಅನಿವಾರ್ಯ ಎಂದರು.
ವ್ಯಾಪಾರಿಗಳ ಹೋರಾಟ ಮುಂದುವರಿಕೆ
ಸಭೆಯ ಬಳಿಕ ಪ್ರತಿಕ್ರಿಯಿಸಿದ ಬೀದಿ ಬದಿ ವ್ಯಾಪಾರಿಗಳ ಜಂಟಿ ಕ್ರಿಯಾಸಮಿತಿಯ ವಿನಯ್ ಶ್ರೀನಿವಾಸ್, ಪ್ರಮುಖ ರಸ್ತೆಗಳಲ್ಲಿನ ತೆರವು ಕಾರ್ಯಾಚರಣೆ ನಿಲ್ಲಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಎಲ್ಲಾ ವ್ಯಾಪಾರಿಗಳ ಸಂಘಟನೆಗಳು ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಶೀಘ್ರದಲ್ಲೇ ನಿರ್ಧರಿಸಲಿವೆ ಎಂದು ಹೇಳಿದರು.
ಇಂದಿನಿಂದ ಅನಾಥ ವಾಹನಗಳ ತೆರವು ಕಾರ್ಯಾಚರಣೆ
ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಜೊತೆಗೆ, ಶುಕ್ರವಾರದಿಂದ ನಗರದ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸರ್ಕಾರಿ ಜಾಗಗಳಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿರುವ ಹಳೆಯ ಹಾಗೂ ಕೆಟ್ಟುಹೋಗಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆಯೂ ಆರಂಭವಾಗಿದೆ.
ಕ್ವೀನ್ಸ್ ರಸ್ತೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಈ ಕಾರ್ಯಾಚರಣೆಗೆ ಅಧಿಕೃತ ಚಾಲನೆ ನೀಡಿದ್ದು, ಬಿಬಿಎಂಪಿ ಅಧಿಕಾರಿಗಳು ಹಾಗೂ ಎಂಜಿನಿಯರ್ಗಳು ಸ್ಥಳದಲ್ಲೇ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಈಗಾಗಲೇ ಪ್ರಮುಖ ರಸ್ತೆಗಳಲ್ಲಿ ನಿಂತಿರುವ ಅನಾಥ ವಾಹನಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ತೆರವುಗೊಳಿಸಲು ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿ ಟೋಯಿಂಗ್ ವಾಹನಗಳನ್ನು ಸಿದ್ಧಪಡಿಸಲಾಗಿದೆ. ತೆರವುಗೊಳಿಸಿದ ವಾಹನಗಳನ್ನು ಇರಿಸಲು ಪ್ರತ್ಯೇಕ ಸ್ಥಳಗಳನ್ನೂ ಗುರುತಿಸಲಾಗಿದೆ.
ಅಂಗಡಿಗಳ ಒತ್ತುವರಿ, ಜಾಹೀರಾತು ಫಲಕಗಳಿಗೂ ಕ್ರಮ
ಈ ಕಾರ್ಯಾಚರಣೆ ಕೇವಲ ಬೀದಿ ಬದಿ ವ್ಯಾಪಾರಿಗಳ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ವ್ಯಾಪಾರ ಮಾಡುತ್ತಿದ್ದ 1,581 ಅಂಗಡಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಅಂಗಡಿಗಳ ಮುಂದೆ ಅಳವಡಿಸಿದ್ದ 1,790 ಜಾಹೀರಾತು ಫಲಕಗಳು ಹಾಗೂ ನಗರದ ವಿವಿಧ ಭಾಗಗಳಲ್ಲಿ ಪಾದಚಾರಿ ಮಾರ್ಗದ ಮೇಲೆ ಅಳವಡಿಸಿದ್ದ 2,200 ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ಪಾದಚಾರಿಗಳ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಪ್ರಮುಖ ರಸ್ತೆಗಳಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದ್ದು, ಅದೇ ವೇಳೆ ಅರ್ಹ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿ ಅವರ ಜೀವನೋಪಾಯಕ್ಕೂ ಸರ್ಕಾರ ರಕ್ಷಣೆ ಒದಗಿಸುವ ಭರವಸೆ ನೀಡಿದೆ.

