ಬೆಂಗಳೂರು- ರಾಜ್ಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆಗಳು ಅಂತಿಮ ಹಂತ ತಲುಪಿರುವ ಬೆನ್ನಲ್ಲೇ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲಿರುವ ಸಚಿವರ ಪಟ್ಟಿಯನ್ನು ಸರ್ಕಾರ ಅಧಿಕೃತಗೊಳಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದು, ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ತುಮಕೂರಿನಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಈ ಬಾರಿ ವಿಶೇಷವಾಗಿ ಗಮನ ಸೆಳೆದಿರುವುದು ಬೆಂಗಳೂರು ಮೂಲದ ಸಚಿವರಾದ ಕೃಷ್ಣಭೈರೇಗೌಡ ಹಾಗೂ ರಿಜ್ವಾನ್ ಅರ್ಷದ್ ಅವರಿಗೆ ಯಾವುದೇ ಜಿಲ್ಲಾ ಕೇಂದ್ರದ ಧ್ವಜಾರೋಹಣದ ಜವಾಬ್ದಾರಿ ನೀಡದಿರುವುದು. ರಾಜ್ಯಮಟ್ಟದ ಕಾರ್ಯಕ್ರಮ ಬೆಂಗಳೂರಿನಲ್ಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡರಿಗೆ ಪ್ರತ್ಯೇಕ ಜಿಲ್ಲೆಯ ಜವಾಬ್ದಾರಿ ಸಿಕ್ಕಿಲ್ಲ ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಪ್ರಸ್ತುತ ಸಚಿವ ಸಂಪುಟ ರಚನೆಯೇ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಬಳಿಕ ನಡೆದಿದ್ದು, 2026ರ ಜೂನ್‌ನಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೊಸ ಸಂಪುಟದಲ್ಲಿ ಹಿರಿಯರು, ಅನುಭವಿಗಳು ಹಾಗೂ ಹೊಸ ಮುಖಗಳ ನಡುವೆ ಸಮತೋಲನ ಸಾಧಿಸುವ ಪ್ರಯತ್ನ ನಡೆದಿತ್ತು.
ಹಿಂದಿನ ಪಟ್ಟಿಗಳಿಗಿಂತ ಬದಲಾಗಿರುವ ಚಿತ್ರ
ಜಿಲ್ಲಾ ಕೇಂದ್ರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸಚಿವರಿಂದ ಧ್ವಜಾರೋಹಣ ಮಾಡಿಸುವುದು ಕರ್ನಾಟಕದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಡಳಿತಾತ್ಮಕ ಪರಿಪಾಠ. ಆದರೆ ಸಚಿವರ ಖಾತೆ, ಜಿಲ್ಲಾ ಉಸ್ತುವಾರಿ ಬದಲಾದಂತೆ ಧ್ವಜಾರೋಹಣದ ಜವಾಬ್ದಾರಿಯಲ್ಲೂ ಬದಲಾವಣೆ ಕಂಡುಬರುತ್ತದೆ.
2025ರ ಪಟ್ಟಿಯನ್ನು ಗಮನಿಸಿದರೆ ಆಗ ಕೃಷ್ಣಭೈರೇಗೌಡರಿಗೆ ಬಳ್ಳಾರಿ ಜಿಲ್ಲೆಯ ಧ್ವಜಾರೋಹಣದ ಜವಾಬ್ದಾರಿ ನೀಡಲಾಗಿತ್ತು. ಇದೇ ವೇಳೆ ಕೆ.ಎಚ್. ಮುನಿಯಪ್ಪ ಬೆಂಗಳೂರು ಗ್ರಾಮಾಂತರ, ರಾಮಲಿಂಗಾರೆಡ್ಡಿ ಬೆಂಗಳೂರು ದಕ್ಷಿಣ, ಎಂ.ಬಿ. ಪಾಟೀಲ್ ವಿಜಯಪುರ ಹಾಗೂ ಕೆ.ಜೆ. ಜಾರ್ಜ್ ಚಿಕ್ಕಮಗಳೂರಿನಲ್ಲಿ ಧ್ವಜಾರೋಹಣ ನೆರವೇರಿಸುವಂತೆ ನಿಯೋಜಿಸಲಾಗಿತ್ತು.
ಹೀಗಾಗಿ ಒಂದು ವರ್ಷದ ಅವಧಿಯಲ್ಲಿ ಕೃಷ್ಣಭೈರೇಗೌಡರಿಗೆ ಬಳ್ಳಾರಿಯಂತಹ ಜಿಲ್ಲೆಯಲ್ಲಿ ಧ್ವಜಾರೋಹಣದ ಜವಾಬ್ದಾರಿ ದೊರೆತಿದ್ದರೂ, 2026ರಲ್ಲಿ ಯಾವುದೇ ಜಿಲ್ಲೆಯನ್ನು ನಿಯೋಜಿಸದಿರುವುದು ಗಮನಾರ್ಹ ಬದಲಾವಣೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು ನಗರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸ್ವತಃ ಮುನ್ನಡೆಸುತ್ತಿರುವುದು ಎನ್ನಲಾಗುತ್ತಿದೆ.
‘ತವರು ಜಿಲ್ಲೆ’ಯಾಚೆಗೆ ಹಲವು ಸಚಿವರು
ಈ ಬಾರಿಯ ಪಟ್ಟಿಯ ಮತ್ತೊಂದು ವಿಶೇಷವೆಂದರೆ ಹಲವು ಸಚಿವರು ತಮ್ಮ ತವರು ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.
ರಾಮಲಿಂಗಾರೆಡ್ಡಿಗೆ ಕೋಲಾರ, ಬೈರತಿ ಸುರೇಶ್‌ಗೆ ಚಿಕ್ಕಬಳ್ಳಾಪುರ, ಶರಣಪ್ರಕಾಶ್ ಪಾಟೀಲ್‌ಗೆ ಯಾದಗಿರಿ, ಅಜಯ್ ಸಿಂಗ್‌ಗೆ ರಾಯಚೂರು, ಬಸವರಾಜ ರಾಯರೆಡ್ಡಿಗೆ ಗದಗ, ಲಕ್ಷ್ಮಣ ಸವದಿಗೆ ಉತ್ತರ ಕನ್ನಡ, ಪಿ.ಎಂ. ನರೇಂದ್ರಸ್ವಾಮಿಗೆ ಕೊಡಗು, ಜಮೀರ್ ಅಹಮದ್ ಖಾನ್‌ಗೆ ವಿಜಯನಗರ ಹಾಗೂ ಬಸಂತಪ್ಪ ಅವರಿಗೆ ಉಡುಪಿ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ.
ಇಂತಹ ನಿಯೋಜನೆಗಳು ಕೇವಲ ಕಾರ್ಯಕ್ರಮದ ಪ್ರೋಟೋಕಾಲ್‌ಗೆ ಸೀಮಿತವಾಗದೆ, ಸರ್ಕಾರದ ಸಚಿವರು ರಾಜ್ಯದ ವಿವಿಧ ಭಾಗಗಳೊಂದಿಗೆ ನೇರ ಸಂಪರ್ಕ ಹೊಂದುವ ಅವಕಾಶವನ್ನೂ ಕಲ್ಪಿಸುತ್ತವೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸುವುದು, ಸರ್ಕಾರದ ಯೋಜನೆಗಳ ಅನುಷ್ಠಾನ ಪರಿಶೀಲಿಸುವುದು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಅವರ ಪ್ರಮುಖ ಜವಾಬ್ದಾರಿಗಳಾಗಿವೆ.
ಕೃಷ್ಣಭೈರೇಗೌಡರು 2026ರ ಹೊಸ ಸಚಿವ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಖಾತೆ ಹಂಚಿಕೆ ಸಂದರ್ಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ನಗರ ಆಡಳಿತಕ್ಕೆ ಸಂಬಂಧಿಸಿದ ಅಧಿಕಾರಗಳ ವಿಚಾರವೂ ರಾಜಕೀಯವಾಗಿ ಚರ್ಚೆಯಾಗಿತ್ತು.
ಇದೀಗ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರುವುದರಿಂದ, ಬೆಂಗಳೂರು ನಗರಕ್ಕೆ ಸಂಬಂಧಿಸಿದ ಸಚಿವರಾಗಿರುವ ಕಾರಣ ಅವರಿಗೆ ಪ್ರತ್ಯೇಕ ಜಿಲ್ಲಾ ನಿಯೋಜನೆ ಮಾಡಲಾಗಿಲ್ಲ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಬೆಂಗಳೂರಿನ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರೇ ಧ್ವಜಾರೋಹಣ ಮಾಡುವುದರಿಂದ ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಪರ್ಯಾಯ ಜಿಲ್ಲೆಯ ಜವಾಬ್ದಾರಿ ನೀಡುವ ಅಗತ್ಯ ಸರ್ಕಾರಕ್ಕೆ ಕಂಡುಬಂದಿಲ್ಲ ಎನ್ನಬಹುದು.
ರಿಜ್ವಾನ್ ಅರ್ಷದ್ ಅವರಿಗೂ ಇದೇ ರೀತಿ ಯಾವುದೇ ಜಿಲ್ಲೆಯ ಧ್ವಜಾರೋಹಣದ ಜವಾಬ್ದಾರಿ ದೊರೆತಿಲ್ಲ. ಸಚಿವ ಸಂಪುಟ ರಚನೆಯ ಹಂತದಲ್ಲಿಯೇ ಅವರ ಹೆಸರು ಪ್ರಮುಖವಾಗಿ ಚರ್ಚೆಗೆ ಬಂದಿತ್ತು ಎಂಬುದು ಗಮನಾರ್ಹ.
ಈ ಬಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದತ್ತವೂ ರಾಜಕೀಯ ಮತ್ತು ಆಡಳಿತ ವಲಯದ ಗಮನ ನೆಟ್ಟಿದೆ. ವಿಶೇಷವಾಗಿ ಪರಿಸರ ಸಂರಕ್ಷಣೆ, ರೈತರ ಸಹಭಾಗಿತ್ವದ ಮೂಲಕ ಹಸಿರು ವಿಸ್ತರಣೆ ಹಾಗೂ ಭವಿಷ್ಯದ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಘೋಷಣೆಯ ನಿರೀಕ್ಷೆ ಇದೆ.
ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಕಾರ್ಯಕ್ರಮಗಳು ಸರ್ಕಾರದ ಸಾಧನೆಗಳನ್ನು ಬಿಂಬಿಸುವ ವೇದಿಕೆಯೂ ಆಗಿರುವುದರಿಂದ, ರಾಜ್ಯದ ಆಡಳಿತದ ದಿಕ್ಕು ಮತ್ತು ಮುಂದಿನ ಆದ್ಯತೆಗಳ ಬಗ್ಗೆ ಮುಖ್ಯಮಂತ್ರಿ ನೀಡುವ ಸಂದೇಶ ಮಹತ್ವ ಪಡೆಯಲಿದೆ.
2026ರ 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಪಟ್ಟಿಯು ಕೇವಲ ಸಚಿವರ ಕಾರ್ಯಕ್ರಮದ ಹಂಚಿಕೆ ಮಾತ್ರವಾಗಿರದೆ, ಜೂನ್‌ನಲ್ಲಿ ನಡೆದ ರಾಜ್ಯದ ನಾಯಕತ್ವ ಬದಲಾವಣೆ ಮತ್ತು ಹೊಸ ಸಚಿವ ಸಂಪುಟದ ನಂತರದ ಆಡಳಿತಾತ್ಮಕ ಪುನರ್‌ವ್ಯವಸ್ಥೆಯ ಪ್ರತಿಬಿಂಬವೂ ಆಗಿದೆ. ವಿಶೇಷವಾಗಿ ಕಳೆದ ವರ್ಷ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡಿದ್ದ ಕೃಷ್ಣಭೈರೇಗೌಡರಿಗೆ ಈ ಬಾರಿ ಯಾವುದೇ ಜಿಲ್ಲೆ ನೀಡದಿರುವುದು ಮತ್ತು ರಿಜ್ವಾನ್ ಅರ್ಷದ್ ಅವರಿಗೂ ಅವಕಾಶ ಸಿಗದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಆದರೆ ಅಂತಿಮವಾಗಿ ಧ್ವಜಾರೋಹಣದ ವೇದಿಕೆ ರಾಜಕೀಯಕ್ಕಿಂತಲೂ ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಜನಪರ ಆಡಳಿತದ ಸಂಕಲ್ಪವನ್ನು ಪುನರುಚ್ಚರಿಸುವ ವೇದಿಕೆಯಾಗಬೇಕಿದೆ
ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ:
ಕೆ.ಎಚ್.ಮುನಿಯುಪ್ಪ: ಬೆಂಗಳೂರು ಗ್ರಾಮಾಂತರ
ಕೆ.ಜೆ.ಜಾರ್ಜ್: ಚಿಕ್ಕಮಗಳೂರು
ಎಂ.ಬಿ.ಪಾಟೀಲ್: ವಿಜಯಪುರ
ರಾಮಲಿಂಗಾರೆಡ್ಡಿ: ಕೋಲಾರ
ಸತೀಶ್ ಜಾರಕಿಹೊಳಿ: ಬೆಳಗಾವಿ
ಪ್ರಿಯಾಂಕ್ ಖರ್ಗೆ: ಕಲಬುರಗಿ
ಯು.ಟಿ.ಖಾದರ್: ದಕ್ಷಿಣ ಕನ್ನಡ
ಈಶ್ವರ್ ಖಂಡ್ರೆ: ಬೀದರ್
ಡಾ.ಯತೀಂದ್ರ: ಮೈಸೂರು
ಬಿ.ಎಸ್.ಬೈರತಿಸುರೇಶ್: ಚಿಕ್ಕಬಳ್ಳಾಪುರ
ಡಾ.ಶರಣ ಪ್ರಕಾಶ್ ಪಾಟೀಲ್: ಯಾದಗಿರಿ
ಅಜಯ್ ಸಿಂಗ್: ರಾಯಚೂರು
ಎಚ್.ಸಿ.ಬಾಲಕೃಷ್ಣ: ಬೆಂಗಳೂರು ದಕ್ಷಿಣ
ಬಸವರಾಜರಾಯರೆಡ್ಡಿ: ಗದಗ

