ಬೆಂಗಳೂರು- ರಾಜ್ಯದ ನಗರಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಗೃಹ ಕಚೇರಿಯಲ್ಲಿ ‘ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಹಂತ-2)’ರ ರಾಜ್ಯ ಮಟ್ಟದ ಸಮಿತಿ ಸಭೆಯು ಸಚಿವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಮಗ್ರವಾಗಿ ಚರ್ಚಿಸಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಪ್ರತಿಯೊಂದು ಮಹಾನಗರ ಪಾಲಿಕೆಯ ವಿವರಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಜನರಿಗೆ ಸುಲಭವಾಗಿ ತಲುಪಿಸಲು ವಿಶೇಷ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.
ತ್ಯಾಜ್ಯ ನಿರ್ವಹಣೆಗೆ ಆದ್ಯತೆ
ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣವನ್ನು ಆಧರಿಸಿ, ಅದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು (Waste Processing Units) ಕಡ್ಡಾಯವಾಗಿ ಸ್ಥಾಪಿಸಲು ನಿರ್ದೇಶನ ನೀಡಲಾಗಿದೆ.
ತ್ಯಾಜ್ಯವನ್ನು ಮೂಲದಲ್ಲಿಯೇ ವೈಜ್ಞಾನಿಕವಾಗಿ ವಿಂಗಡಿಸಿ ಸಂಸ್ಕರಿಸಲು ಅಗತ್ಯವಿರುವ ಸೆಗ್ರಿಗೇಟಿಂಗ್ ಯಂತ್ರಗಳನ್ನು ಖರೀದಿಸಲು ಆಡಳಿತಾತ್ಮಕ ಸೂಚನೆ ಹೊರಡಿಸಲಾಗಿದೆ.
ಹಾಸನ ಮಹಾನಗರ ಪಾಲಿಕೆ ಅನುಮೋದನೆ:
ಪ್ರಮುಖ ಕಾಮಗಾರಿಗಳಿಗೆ ಅನುಮೋದನೆ
ಹಾಸನ ಮಹಾನಗರ ಪಾಲಿಕೆಯ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿಗಾಗಿ ₹185 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ.
ತುಮಕೂರು ಮಹಾನಗರ ಪಾಲಿಕೆ ಬದಲಿ ಕಾಮಗಾರಿ: ತುಮಕೂರು ಮಹಾನಗರ ಪಾಲಿಕೆಗೆ ಹಂಚಿಕೆಯಾಗಿರುವ ಅನುದಾನದಲ್ಲಿ ನೀರು ಸರಬರಾಜು ವ್ಯವಸ್ಥೆಯ ಸುಧಾರಣೆಗಾಗಿ (ಬಿ.ಎಂ. ಪಾಳ್ಯ ಮತ್ತು ಶೆಟ್ಟಿಹಳ್ಳಿಯಲ್ಲಿ ಮೇಲ್ಮಟ್ಟದ ಜಲಸಂಗ್ರಾಹಕಗಳ ನಿರ್ಮಾಣ, ಪಂಪಿಂಗ್ ಮಷೀನರಿಗಳು ಹಾಗೂ ಏರು ಕೊಳವೆ ಮಾರ್ಗ ಅಳವಡಿಕೆ) ₹6 ಕೋಟಿ ಮೊತ್ತದ ಬದಲಿ ಕಾಮಗಾರಿಗಳ ಕ್ರಿಯಾಯೋಜನೆಗೆ ಸಮ್ಮತಿ ಸೂಚಿಸಲಾಗಿದೆ.
ಸಚಿವರ ನಿರ್ದೇಶನ ಮತ್ತು ಸಭೆಯ ತೀರ್ಮಾನ
ನಗರಗಳ ಬೆಳವಣಿಗೆಗೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಬಲಪಡಿಸುವುದು, ನಾಗರಿಕರಿಗೆ ತ್ವರಿತ ಹಾಗೂ ಪರಿಣಾಮಕಾರಿ ಸೇವೆಗಳನ್ನು ಒದಗಿಸುವುದು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಸ್ಥಿರಗೊಳಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವರು ತಿಳಿಸಿದರು. ಅಲ್ಲದೆ, ಪಾಲಿಕೆಗಳು ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟ ಹಾಗೂ ಅನುಷ್ಠಾನದ ಮೇಲೆ ವಿಶೇಷ ಗಮನಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಉನ್ನತ ಮಟ್ಟದ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಬಿ.ಬಿ. ಕಾವೇರಿ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಪಿ.ಎನ್. ರವೀಂದ್ರ, ಜಂಟಿ ನಿರ್ದೇಶಕರಾದ ಶ್ರೀಮತಿ ತುಷಾರಾಮಣಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

