ಇಂಧೋರ್ನ ಹೊಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಭಾರತ ಹಾಗೂ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಗಳು ಗೆಲುವು ಸಾಧಿಸಿರುವ ಕಾರಣ ಈ ಪಂದ್ಯ ಫೈನಲ್ ಪಂದ್ಯವಾಗಿ ಮಾರ್ಪಟ್ಟಿದ್ದು, ಗೆದ್ದವರು ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ.
ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡು ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿ ಭಾರತಕ್ಕೆ 338 ರನ್ಗಳ ಸವಾಲಿನ ಗುರಿಯನ್ನು ನೀಡಿದೆ.
ನ್ಯೂಜಿಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಹೆನ್ರಿ ನಿಕೋಲ್ಸ್ ಹಾಗೂ ಡಿವಾನ್ ಕಾನ್ವೆ ಕ್ರಮವಾಗಿ ಮೊದಲ ಹಾಗೂ ಎರಡನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ನಿಕೋಲ್ಸ್ ಡಕ್ಔಟ್ ಆದರೆ, ಡಿವಾನ್ ಕಾನ್ವೆ 5 ರನ್ ಗಳಿಸಿದರು. ಹೀಗೆ ಕೇವಲ ಏಳು ಎಸೆತಗಳಲ್ಲಿ ತನ್ನ ಆರಂಭಿಕ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ನ್ಯೂಜಿಲೆಂಡ್ 30 ರನ್ ಗಳಿಸಿದ್ದ ವಿಲ್ ಯಂಗ್ ವಿಕೆಟ್ ಕಳೆದುಕೊಂಡಿತು. ಹೀಗೆ 58 ರನ್ಗೆ 3 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ಗೆ ನಾಲ್ಕನೇ ವಿಕೆಟ್ಗೆ ಜತೆಯಾದ ಡ್ಯಾರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಜೋಡಿ 219 ರನ್ಗಳ ಜತೆಯಾಟವಾಡುವ ಮೂಲಕ ಬೃಹತ್ ಆಸರೆಯಾಯಿತು. ಗ್ಲೆನ್ ಫಿಲಿಪ್ಸ್ 88 ಎಸೆತಗಳಲ್ಲಿ 106 ರನ್ ಬಾರಿಸಿದರೆ, ಡ್ಯಾರಿಲ್ ಮಿಚೆಲ್ 137 ರನ್ ಬಾರಿಸಿದರು. ಇನ್ನುಳಿದಂತೆ ಮಿಚೆಲ್ ಹೇ 2, ಜೇಕರಿ ಫೌಕ್ಸ್ 10, ಕ್ರಿಸ್ಟಿಯನ್ ಕ್ಲಾರ್ಕ್ 11, ಮಿಚೆಲ್ ಬ್ರೇಸ್ವೆಲ್ ಅಜೇಯ 22 ರನ್ ಹಾಗೂ ಯಾವುದೇ ರನ್ ಗಳಿಸದ ಜೇಮಿಸನ್ ಅಜೇಯರಾಗಿ ಉಳಿದರು.
ಭಾರತದ ಪರ ಅರ್ಷ್ದೀಪ್ ಸಿಂಗ್ 3 ವಿಕೆಟ್, ಹರ್ಷಿತ್ ರಾಣಾ 3 ವಿಕೆಟ್, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.

