ಹೊಸ ಹಣಕಾಸು ವರ್ಷ 2026-27 ರಲ್ಲಿ ತೆರಿಗೆ ಪಾವತಿದಾರರು ಐಟಿ ರಿಟರ್ನ್ಸ್ (ITR) ಫೈಲ್ ಮಾಡುವ ಸಮಯ ಬಂದಿದೆ. ಸಾಮಾನ್ಯವಾಗಿ ಪ್ರತಿ ಹಣಕಾಸು ವರ್ಷ ಮುಗಿದ ತಕ್ಷಣ, ಆ ಅವಧಿಯಲ್ಲಿ ಗಳಿಸಿದ ಆದಾಯವು ಮಿತಿಯನ್ನು ಮೀರಿದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ.
ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯಲ್ಲಿ ನೀವು ಯಾವುದನ್ನು ಆರಿಸಿಕೊಂಡಿದ್ದೀರೋ ಅದರ ಪ್ರಕಾರ ಐಟಿ ರಿಟರ್ನ್ಸ್ ಫೈಲ್ ಮಾಡಬೇಕು. ಒಂದು ವೇಳೆ ನೀವು ಯಾವುದನ್ನೂ ಆಯ್ಕೆ ಮಾಡದಿದ್ದರೆ, ಹೊಸ ತೆರಿಗೆ ಪದ್ಧತಿಯೇ (New Tax Regime) ಡಿಫಾಲ್ಟ್ ಆಗಿ ಅನ್ವಯಿಸುತ್ತದೆ. ವೈಯಕ್ತಿಕ ತೆರಿಗೆದಾರರಿಗೆ ಐಟಿ ರಿಟರ್ನ್ಸ್ ಸಲ್ಲಿಸಲು ಸಾಮಾನ್ಯವಾಗಿ ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ. ಆ ನಂತರ ಸಲ್ಲಿಸಿದರೆ ದಂಡ ಪಾವತಿಸಬೇಕಾಗುತ್ತದೆ. ಈ ಅವಸರದಲ್ಲಿ ಅನೇಕರು ತಪ್ಪುಗಳನ್ನು ಮಾಡುತ್ತಾರೆ. ಸಣ್ಣ ತಪ್ಪುಗಳು ಕೂಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ಐಟಿಆರ್ ಫೈಲಿಂಗ್ ಸಮಯದಲ್ಲಿ ಜಾಗರೂಕರಾಗಿರುವುದು ಅವಶ್ಯಕ.
ಸರಿಯಾದ ಐಟಿಆರ್ ಫಾರ್ಮ್ ಆಯ್ಕೆ ಮಾಡದಿರುವುದು, ಪೂರ್ಣ ಆದಾಯವನ್ನು ಬಹಿರಂಗಪಡಿಸದಿರುವುದು ಮತ್ತು ತಪ್ಪು ವಿವರಗಳನ್ನು ನೀಡುವುದು ಸಾಮಾನ್ಯ ತಪ್ಪುಗಳಾಗಿವೆ. ಮೊದಲು ಯಾರಿಗೆ ಯಾವ ಫಾರ್ಮ್ ಅನ್ವಯಿಸುತ್ತದೆ ಎಂದು ತಿಳಿದುಕೊಳ್ಳಿ:
- ITR-1: ವೇತನದಾರರಿಗೆ (Salary) ಇದು ಅನ್ವಯಿಸುತ್ತದೆ. ಮನೆ ಆಸ್ತಿ ಅಥವಾ ಇತರ ಮೂಲಗಳಿಂದ ಆದಾಯವಿದ್ದರೂ ಇದನ್ನು ಬಳಸಬಹುದು.
- ITR-2: ವ್ಯವಹಾರದ ಆದಾಯವಿಲ್ಲದ ಹಿಂದೂ ಅವಿಭಜಿತ ಕುಟುಂಬಗಳಿಗೆ (HUF) ಇದು ಅನ್ವಯಿಸುತ್ತದೆ.
- ITR-3: ವ್ಯಾಪಾರ ಅಥವಾ ವೃತ್ತಿಯ ಮೂಲಕ ಆದಾಯ ಪಡೆಯುವ ವ್ಯಕ್ತಿಗಳು ಮತ್ತು HUFಗಳಿಗೆ ಇದು ಅನ್ವಯಿಸುತ್ತದೆ.
- ITR-4: ವ್ಯಾಪಾರ ಅಥವಾ ವೃತ್ತಿಯಿಂದ ಹೆಚ್ಚಿನ ಆದಾಯವಿರುವವರು ಇದನ್ನು ಫೈಲ್ ಮಾಡಬೇಕು.
ಸಾಮಾನ್ಯವಾಗಿ ಮಾಡುವ 10 ತಪ್ಪುಗಳು ಇವೇ
- ಸರಿಯಾದ ಫಾರ್ಮ್ ಆಯ್ಕೆ: ತಪ್ಪು ಐಟಿಆರ್ ಫಾರ್ಮ್ ಆರಿಸಿಕೊಂಡರೆ ಐಟಿ ಇಲಾಖೆಯಿಂದ ನೋಟಿಸ್ ಬರುತ್ತದೆ ಮತ್ತು ಮತ್ತೆ ಸರಿಪಡಿಸಿ ಫೈಲ್ ಮಾಡಬೇಕಾಗುತ್ತದೆ.
- ಇ-ವೆರಿಫೈ (e-Verify): ಐಟಿಆರ್ ಫೈಲ್ ಮಾಡಿದರೆ ಮಾತ್ರ ಸಾಲದು. 30 ದಿನಗಳೊಳಗೆ ಅದನ್ನು ಇ-ವೆರಿಫೈ ಮಾಡಬೇಕು. ಆಗಲೇ ನಿಮ್ಮ ಐಟಿಆರ್ ಮಾನ್ಯವಾಗುತ್ತದೆ.
- ವೈಯಕ್ತಿಕ ವಿವರಗಳು: ಹೆಸರು, ವಿಳಾಸ, ಇ-ಮೇಲ್, ಪ್ಯಾನ್ (PAN) ಸಂಖ್ಯೆ, ಫೋನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕದ ವಿವರಗಳು ಸರಿಯಾಗಿರಬೇಕು. ಅಸೆಸ್‌ಮೆಂಟ್ ಇಯರ್ (Assessment Year) ಸರಿಯಾಗಿ ಆಯ್ಕೆ ಮಾಡಿ.
- ತೆರಿಗೆ ಪದ್ಧತಿ: ಸರಿಯಾದ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಿ, ಇಲ್ಲದಿದ್ದರೆ ನೀವು ಹೆಚ್ಚಿನ ತೆರಿಗೆ ಪಾವತಿಸಬೇಕಾಗಬಹುದು.
- ಆದಾಯದ ವಿವರ: ಉಳಿತಾಯ ಖಾತೆಯ ಬಡ್ಡಿಯಿಂದ ಹಿಡಿದು ಸಂಬಳದವರೆಗೆ ಎಲ್ಲಾ ಆದಾಯವನ್ನು ಸ್ಪಷ್ಟಪಡಿಸಿ. ಬಾಡಿಗೆ ಆದಾಯ, ಕ್ಯಾಪಿಟಲ್ ಗೇನ್ಸ್ (Capital Gains) ವಿವರಗಳನ್ನು ಮರೆಯಬೇಡಿ.
- AIS ಮತ್ತು ಫಾರ್ಮ್ 26AS: ಐಟಿಆರ್ ಸಲ್ಲಿಸುವ ಮುನ್ನ ನಿಮ್ಮ ವಿವರಗಳನ್ನು ಫಾರ್ಮ್ 26AS ಮತ್ತು ಆನ್ಯುವಲ್ ಇನ್ಫರ್ಮೇಷನ್ ಸ್ಟೇಟ್ಮೆಂಟ್ (AIS) ನೊಂದಿಗೆ ತಾಳೆ ನೋಡಿ. ಇಲ್ಲದಿದ್ದರೆ ಟಿಡಿಎಸ್ (TDS) ಅಥವಾ ರಿಫಂಡ್ ವಿಷಯದಲ್ಲಿ ವ್ಯತ್ಯಾಸವಾಗಬಹುದು.
- ಕಂಪನಿ ಬದಲಾವಣೆ: ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಿದವರು, ಎಲ್ಲಾ ಕಂಪನಿಗಳಿಂದಲೂ ಫಾರ್ಮ್-16 ಪಡೆದುಕೊಂಡು ವಿವರ ನೀಡಬೇಕು.
- ಅಡ್ವಾನ್ಸ್ ಟ್ಯಾಕ್ಸ್: ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಬೇಕಿದ್ದರೆ ನಿಗದಿತ ಸಮಯಕ್ಕೆ (ಜೂನ್ 15, ಸೆಪ್ಟೆಂಬರ್ 15, ಡಿಸೆಂಬರ್ 15, ಮಾರ್ಚ್ 15) ಪಾವತಿಸಿ. ವಿಳಂಬವಾದರೆ ತಿಂಗಳಿಗೆ ಶೇ. 1 ರಷ್ಟು ದಂಡ ಬೀಳುತ್ತದೆ.
- ತೆರಿಗೆ ವಿನಾಯಿತಿಗಳು: ಕ್ಯಾಪಿಟಲ್ ಗೇನ್ಸ್ ಪಡೆದಾಗ ಸೆಕ್ಷನ್ 54, 54EC, 54F ಅಡಿಯಲ್ಲಿ ಸಿಗುವ ತೆರಿಗೆ ವಿನಾಯಿತಿಗಳನ್ನು ಬಳಸಿಕೊಳ್ಳಲು ಮರೆಯಬೇಡಿ.
- ನೋಟಿಸ್‌ಗಳಿಗೆ ಸ್ಪಂದಿಸುವುದು: ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ನೋಟಿಸ್ ಬಂದರೆ ತಕ್ಷಣ ಸ್ಪಂದಿಸಿ. ನಿರ್ಲಕ್ಷ್ಯ ಮಾಡಿದರೆ ಕಾನೂನು ಕ್ರಮ ಅಥವಾ ಭಾರಿ ದಂಡ ಎದುರಿಸಬೇಕಾಗುತ್ತದೆ.

