ಬೆಂಗಳೂರು: ಸಿಇಟಿ ಅರ್ಜಿಯಲ್ಲಿ ಅರ್ಹತಾ ಕಂಡಿಕೆ A1, B1, B, C, D, E, F, G, H, I, J, K, L, M, N and O ಎಂದು ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಮೇ 11ರಿಂದ 22ರವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಕಚೇರಿಯಲ್ಲಿ ಮಾಡಲಾಗುತ್ತದೆ.
ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಮುನ್ನ ವೆಬ್ ಸೈಟ್ ನಲ್ಲಿ ನೀಡಿರುವ ಲಿಂಕ್ ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು ಬರಬೇಕು. ಮೇ 7ರಿಂದ ಸ್ಲಾಟ್ ಬುಕ್ ಲಿಂಕ್ ತೆರೆದುಕೊಳ್ಳಲಿದೆ.
ದಾಖಲೆ ಪರಿಶೀಲನೆಗೆ ಅಭ್ಯರ್ಥಿಗಳೇ ಬರಬೇಕು. ಅವರ ಪರವಾಗಿ ಯಾರೂ ಬರುವಂತಿಲ್ಲ.
ಪರಿಶೀಲನೆ ವೇಳೆ ಸಲ್ಲಿಸಬೇಕಾದ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಇ-ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ.
ಸಿಇಟಿ-2026 ಪ್ರವೇಶ ಪತ್ರ ಮತ್ತು ಅರ್ಜಿ, ಗುರುತಿನ ಚೀಟಿ (ಆಧಾರ್ ಕಾರ್ಡ್) 12 ಮತ್ತು 10ನೇ ತರಗತಿಯ ಅಂಕಪಟ್ಟಿ, ವ್ಯಾಸಂಗ ಪ್ರಮಾಣ ಪತ್ರ, ಪೋಷಕರ ಪ್ರಮಾಣ ಪತ್ರಗಳು, ಅರ್ಹತಾ ಖಂಡಿಕೆಗೆ ಅನುಗುಣವಾಗಿ ಅವಶ್ಯಕವಿರುವ ಇತರೆ ಎಲ್ಲ ಮೂಲ ದಾಖಲೆ ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಬರಬೇಕು.
ಪರಿಶೀಲನೆಗೆ ಹಾಜರಾಗಿ ಅರ್ಹತೆ ಪಡೆಯುವ ಅಭ್ಯರ್ಥಿಗಳಿಗೆ ಮಾತ್ರ ಆನ್ ಲೈನ್ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಹಾಗೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ.
*Y* ಅರ್ಹತಾ ಕಂಡಿಕೆಯ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

