ಬೆಂಗಳೂರು: ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ನೀಟ್ ಬರೆದು, ಅರ್ಹರಾಗಿರುವ ಹಾಗೂ ಯುಜಿಸಿಇಟಿಗೆ ಇದುವರೆಗೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ ಜುಲೈ 24ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಲಿಂಕ್ ಬಿಡುಗಡೆ ಮಾಡಿದೆ.
ಯುಜಿ ಸಿಇಟಿಗೆ ಅರ್ಜಿ ಸಲ್ಲಿಸಿ, ನೀಟ್ ನಲ್ಲಿ ಅರ್ಹರಾಗಿರುವ ಅಭ್ಯರ್ಥಿಗಳಿಗೆ ನೀಟ್ ರೋಲ್ ನಂಬರ್ ಅನ್ನು ಸಿಇಟಿ ಅರ್ಜಿ ಜತೆ ಜೋಡಿಸಲು ಸದ್ಯದಲ್ಲೇ ಲಿಂಕ್ ಬಿಡುಗಡೆ ಮಾಡಲಾಗುವುದು. ಆದರೆ ಇದುವರೆಗೂ ಯಾರು ಅರ್ಜಿಯನ್ನೇ ಸಲ್ಲಿಸಿಲ್ಲವೊ ಅಂತಹವರು ಹೊಸದಾಗಿ ಅರ್ಜಿ ಸಲ್ಲಿಸಬಹುದು.
ಕರ್ನಾಟಕೇತರ ಅಭ್ಯರ್ಥಿಗಳು ಕೂಡ ಕೆಇಎ ಪೋರ್ಟಲ್ ನಲ್ಲಿ ನೋಂದಣಿ ಮಾಡಿ, ಶುಲ್ಕ ಪಾವತಿಸಬೇಕು. 12ನೇ ತರಗತಿಯ ಅಂಕಗಳನ್ನು ದಾಖಲಿಸಬೇಕು. ಅಂಕಪಟ್ಟಿಯನ್ನು ಅಪ್ ಲೋಡ್ ಮಾಡುವುದಕ್ಕೂ ಅವಕಾಶ ನೀಡಲಾಗಿದೆ. ಇವರು ದಾಖಲೆ ಪರಿಶೀಲನೆಗೆ ಬರುವ ಅಗತ್ಯ ಇರುವುದಿಲ್ಲ.
ಓಸಿಐ, ಪಿಐಓ, ಎನ್ ಆರ್ ಐ ಮತ್ತು ವಿದೇಶಿ ಅಭ್ಯರ್ಥಿಗಳು, ಕರ್ನಾಟಕೇತರ ಅಭ್ಯರ್ಥಿಗಳು ಧಾರ್ಮಿಕ ಅಲ್ಪಸಂಖ್ಯಾತ ಅಥವಾ ಎನ್ ಆರ್ ಐ ವಾರ್ಡ್ ಸೀಟುಗಳನ್ನು ಅಥವಾ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ನಿರ್ದಿಷ್ಟ ಸೀಟುಗಳನ್ನು ಪಡೆಯಲು ಅರ್ಹರಿದ್ದಲ್ಲಿ ಅಂತಹ ಅಭ್ಯರ್ಥಿಗಳು ಮಾತ್ರ ಸ್ಲಾಟ್ ಬುಕ್ ಮಾಡಿಕೊಂಡು ನಿಗದಿತ ದಿನಾಂಕಗಳಂದು ದಾಖಲೆ ಪರಿಶೀಲನೆಗೆ ಬರಬೇಕು. ದಿನಾಂಕಗಳನ್ನು ನಂತರ ತಿಳಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

