ದೇಶವ್ಯಾಪಿಯಾಗಿ ಸುದ್ದಿ ಮಾಡಿಕೊಂಡು ನಿರ್ಮಾಣವಾಗಿದ್ದ ಅಯೋಧ್ಯೆ ರಾಮ ಮಂದಿರದಲ್ಲಿ ಆಗಿರುವ ದೊಡ್ಡ ಅಕ್ರಮದ ಬಗ್ಗೆ ಆರ್.ಎಸ್.ಎಸ್.ನ ನಿಲುವೇನು ಎಂದು ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಪ್ರಶ್ನಿಸಿದ್ದಾರೆ.
ಮಂದಿರ ಅಲ್ಲೇ ಕಟ್ಟುವೆವು ಎಂದು ಹೇಳುತ್ತಿದ್ದವರು ಈಗ ಏನು ಹೇಳುತ್ತಾರೆ? ಅಂದ ಹಾಗೆ ಹಿಂದೂ ಧರ್ಮ ಎಂದರೆ ರಾಮ ಎಂಬಂತೆ ಬಿಂಬಿಸುವ ಮನುವಾದಿಗಳ ತರ್ಕದ ಪ್ರಕಾರ ಅಯೋಧ್ಯೆಯ ರಾಮ ಮಂದಿರದ ಅಕ್ರಮವು ‘ಹಿಂದೂ ಧರ್ಮದಲ್ಲಾದ ಅಕ್ರಮ’ ಎಂದಾಗುತ್ತದೆ. ಈ ಬಗ್ಗೆ ನಮ್ಮ ಸೋ ಕಾಲ್ಡ್ ರಾಮ ಭಕ್ತರು ಮತ್ತು ಬಿಜೆಪಿಯವರು ಏನು ಹೇಳುತ್ತಾರೆ ಎಂದು ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
ನಗದು, ಆಭರಣ, ದಾಖಲೆ ವಶಕ್ಕೆ
ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಭಾನುವಾರ ಎಂಟು ಆರೋಪಿಗಳೊಂದಿಗೆ ಸಂಪರ್ಕ ಹೊಂದಿರುವ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಶೋಧದ ಸಮಯದಲ್ಲಿ ಆಭರಣಗಳು, ನಗದು ಮತ್ತು ಹಲವಾರು ಆಸ್ತಿ ಸಂಬಂಧಿತ ದಾಖಲೆಗಳು ಸೇರಿದಂತೆ ಹಲವಾರು ಅಮೂಲ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಲ್ಲಾ ಶಂಕಿತರ ಮನೆಗಳಲ್ಲಿ ಏಕಕಾಲದಲ್ಲಿ ದಾಳಿ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಟಿನು ಎಂದು ಗುರುತಿಸಲಾದ ಆರೋಪಿಯಿಂದ, ತನಿಖಾಧಿಕಾರಿಗಳು ಪ್ರಮುಖ ದಾಖಲೆಗಳ ಜೊತೆಗೆ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಕ್ಷ್ಯ ಸಂಗ್ರಹ ಪ್ರಕ್ರಿಯೆಯ ಭಾಗವಾಗಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು ಕುಟುಂಬ ಸದಸ್ಯರಿಂದ ಹೇಳಿಕೆಗಳನ್ನು ದಾಖಲಿಸಿದ್ದಾರೆ.

