ಬಳ್ಳಾರಿ ಜಿಲ್ಲೆಯ ವಿವಿಧ ಕಡೆ ವೈದ್ಯಕೀಯ ಪದವಿ ಪಡೆಯದೇ ತಾವು ವೈದ್ಯರೆಂದು ಬಿಂಬಿಸಿ ವೈದ್ಯ ವೃತ್ತಿ ಮಾಡುತ್ತಿದ್ದ ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಲಾಗಿದೆ. ಈ ಸಮಯದಲ್ಲಿ ಕ್ಲಿನಿಕ್ಗಳನ್ನು ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.
ನಗರದ ಮುಲ್ಲಂಗಿ ಸಂಜೀವಪ್ಪ ಬೀದಿ, ಕೊಲ್ಮಿಚೌಕ್ ಹತ್ತಿರದಲ್ಲಿ ಬಿಸ್ವಾಸ್ ಎಂಬುವವ ಯಾವುದೇ ವೈದ್ಯಕೀಯ ಪದವಿ ಮಾನ್ಯತೆ ಪಡೆಯದೇ ನಕಲಿ ವೈದ್ಯನಾಗಿದ್ದು, ತಾನು ಫೈಲ್ಸ್ ವೈದ್ಯನೆಂದು ಸಾರ್ವಜನಿಕರಲ್ಲಿ ಸುಳ್ಳು ಹೇಳಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಸಾರ್ವಜನಿಕರಿಂದ ದೂರು ಬಂದ ಮೇಲೆ ದಾಳಿ ಮಾಡಿ, ಕ್ಲಿನಿಕ್ಗೆ ಬೀಗ ಹಾಕಲಾಗಿದೆ.
ಕುಡುತಿನಿ ಗ್ರಾಮದ ನಕಲಿ ವೈದ್ಯ ಎಮ್.ಡಿ.ಗೌಸ್. ಸಾರ್ವಜನಿಕರಿಗೆ ವೈದ್ಯನೆಂದು ಬಿಂಬಿಸಿ ಯಾವುದೇ ವೈದ್ಯಕೀಯ ಪದವಿ ಪಡೆಯದ ಈತ ಕೇವಲ 10ನೇ ತರಗತಿ ಓದಿ, ಔಷಧಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಕ್ಲಿನಿಕ್ ಮೇಲೆ ದಾಳಿ ಮಾಡಿ ಕ್ಲಿನಿಕ್ ಸೀಜ್ ಮಾಡಲಾಗಿದೆ.
ಅದೇರೀತಿಯಾಗಿ ಬಳ್ಳಾರಿ ತಾಲ್ಲೂಕಿನ ಸಿರಿವಾರ ಗ್ರಾಮದಲ್ಲಿ ಡಾ.ಪ್ರಕಾಶ್ ಎಂಬುವವರು, ಬಿ.ಎ.ಎಮ್.ಎಸ್ ವಿದ್ಯಾರ್ಹತೆ ಪಡೆದು ಚಿಕಿತ್ಸೆ ನೀಡುತ್ತಿದ್ದು, ಕೆ.ಪಿ.ಎಮ್.ಇ ಕಾಯ್ದೆ ಕಾಯ್ದೆ ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಇವರ ಎಮ್.ಜಿ. ಕ್ಲಿನಿಕ್ ಅನ್ನು ಸಹ ಸೀಜ್ ಮಾಡಲಾಗಿದೆ.
ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಅಧಿಕೃತ ವೈದ್ಯ ಪದವಿ ಪಡೆದ ವೈದ್ಯರ ಬಳಿ ತಪಾಸಣೆ ಮಾಡಿಸುವ ಮೂಲಕ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೇಳಿದ್ದಾರೆ.
ಗ್ರಾಮಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬಂದಲ್ಲಿ ಸಾರ್ವಜನಿಕರು ಅವರ ವೈದ್ಯಕೀಯ ಪದವಿಯ ಮಾಹಿತಿಯನ್ನು ಪಡೆದುಕೊಂಡು ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ನಕಲಿ ವೈದ್ಯರು ಎಂದು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಿದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
ಈ ದಾಳಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ಅಬ್ದುಲ್ಲಾ ಮತ್ತು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಹೆಚ್ ಗೋಪಾಲ್, ಆರ್.ಬಿ.ಎಸ್.ಕೆ ಸಮಾಲೋಚಕ ಮನೋಹರ್ ಹಾಗೂ ವೈದ್ಯರು ತಂಡದ ಜೊತೆ ಮಾಡಲಾಗಿದೆ.

