ಜೈಪುರ: ವರದಕ್ಷಿಣೆಗಾಗಿ ಸೊಸೆಗೆ ಕಿರುಕುಳ ನೀಡುವವರಿಗೆ ರಾಜಸ್ಥಾನ ಸರ್ಕಾರವು ಒಂದು ವಿಭಿನ್ನ ಶಿಕ್ಷೆಯನ್ನು ಜಾರಿಗೆ ತಂದಿದೆ. ಇನ್ಮುಂದೆ ವರದಕ್ಷಿಣೆ ಕಿರುಕುಳ ನೀಡುವ ಕುಟುಂಬಗಳ ಅಡುಗೆ ಅನಿಲ (LPG) ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ.
ಹೌದು. ವರದಕ್ಷಿಣೆಗಾಗಿ ಸೊಸೆಯಂದಿರಿಗೆ ನರಕಯಾತನೆ ನೀಡುವ ಕ್ರೂರಿಗಳಿಗೆ ರಾಜಸ್ಥಾನ ಸರ್ಕಾರವು ‘ಬಿಸಿ’ ಮುಟ್ಟಿಸುವಂತಹ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ಮುಂದೆ ವರದಕ್ಷಿಣೆ ಕಿರುಕುಳದ ಆರೋಪ ಸಾಬೀತಾದ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯದ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ಕಟ್ ಮಾಡಲಾಗುವುದು. ಅಡುಗೆ ಮನೆಗೆ ಲಗ್ಗೆ ಇಟ್ಟಿರುವ ಈ ಹೊಸ ಕಾನೂನು ಈಗ ಇಡೀ ದೇಶದ ಗಮನ ಸೆಳೆದಿದೆ.
ವರದಕ್ಷಿಣೆಗಾಗಿ ಸೊಸೆಗೆ ಮಾನಸಿಕ ಅಥವಾ ದೈಹಿಕ ಕಿರುಕುಳ ನೀಡುವ ಪ್ರಕರಣಗಳಲ್ಲಿ ಆರೋಪ ಸಾಬೀತಾದಲ್ಲಿ, ಆ ಮನೆಗೆ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು.ವರದಕ್ಷಿಣೆ ಪೀಡಿತ ಪ್ರಕರಣಗಳ ಮೇಲೆ ಪೊಲೀಸರು ಈಗ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಕುರಿತು ರಾಜಸ್ಥಾನ ಪೊಲೀಸರು ತಮ್ಮ ಅಧಿಕೃತ ‘X’ (ಟ್ವಿಟ್ಟರ್) ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಸಿಲಿಂಡರ್ಗಳ ಕೊರತೆ ಇಲ್ಲದಿದ್ದರೂ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಇಂತಹ ಆರ್ಥಿಕ ಮತ್ತು ಸಾಮಾಜಿಕ ನಿರ್ಬಂಧ ಹೇರುವುದು ಸರ್ಕಾರದ ಉದ್ದೇಶವಾಗಿದೆ
.ಅಧಿಕೃತ ಜಾರಿ: ಈ ನಿಯಮವನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಇದರ ಅಧಿಕೃತ ದಿನಾಂಕ ಪ್ರಕಟವಾಗಲಿದೆ. ವರದಕ್ಷಿಣೆ ಪಡೆಯುವುದು ಮತ್ತು ನೀಡುವುದು ಎರಡೂ ಕಾನೂನುಬಾಹಿರ. ಈಗ ರಾಜಸ್ಥಾನ ಸರ್ಕಾರವು ಈ ಪಿಡುಗನ್ನು ಮಟ್ಟಹಾಕಲು “ಮನೆಯ ಅಡುಗೆಯನ್ನೇ ಸ್ಥಗಿತಗೊಳಿಸುವ” ವಿಶಿಷ್ಟ ಕ್ರಮಕ್ಕೆ ಮುಂದಾಗಿದೆ.

