ಕೋಲಾರ: ಗದಗ ಜಿಲ್ಲೆಯಲ್ಲಿ ಶಾಸಕರೊಬ್ಬರು ಕಮಿಷನ್ ಕೇಳಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿಯೂ ಒಬ್ಬರು, ಇಬ್ಬರು ಶಾಸಕರು ಸಿಗುತ್ತಾರೆ. ಭೂಮಿ ಪೂಜೆ ನೆರವೇರಿಸುವ ನೆಪದಲ್ಲಿ ಗುತ್ತಿಗೆದಾರರ ಮೇಲೆ ಪರ್ಸೆಂಟೇಜ್ ವಿಚಾರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಅಂತಹ ಶಾಸಕರು ಮೂರು ಪಕ್ಷಗಳಲ್ಲಿಯೂ ಇದ್ದು, ಮುಖ್ಯಮಂತ್ರಿಗಳು ಕೇಳಿದರೆ ಅವರ ಹೆಸರನ್ನು ಬಹಿರಂಗಪಡಿಸುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ತಿಳಿಸಿದ್ದಾರೆ.
ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆಗಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುತಿದ್ದೇವೆ. ಇಂತಹ ಸಂದರ್ಭದಲ್ಲಿ ಕಮಿಷನ್ ಕೇಳಿದ ಶಾಸಕರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿ ಗುತ್ತಿಗೆದಾರ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನು ರಾಜ್ಯ ಸಂಘ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಕೆಲವು ಕಡೆಗಳಲ್ಲಿ ಶಾಸಕರೇ ಗುತ್ತಿಗೆದಾರರಾಗಿದ್ದಾರೆ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲು ಕೆಲವು ಇಲಾಖೆಗಳಲ್ಲಿ ಹಿಂದಿನ ಸರ್ಕಾರಕ್ಕಿಂತ ಮೂರು ಪಟ್ಟು ಕಮಿಷನ್ ಕೇಳುತ್ತಾರೆ. ಸಣ್ಣ ಹಾಗೂ ಮಧ್ಯಮ ವರ್ಗದ ಒಂದೂವರೆ ಲಕ್ಷ ಗುತ್ತಿಗೆದಾರರಿದ್ದಾರೆ. ಈ ವಿಚಾರ ಪ್ರಸ್ತಾಪಿಸಿದರೆ ಹಣ ಬರಲು ಮತ್ತೆ ಎರಡು ವರ್ಷವಾಗುತ್ತದೆ. ಹೀಗಾಗಿ ಅಂತಹ ತಪ್ಪು ಮಾಡುವುದಿಲ್ಲ. ಮೂರು ವರ್ಷಗಳಿಂದ 37 ಸಾವಿರ ಕೋಟಿ ರೂಪಾಯಿ ಬಾಕಿ ಇದೆ. ಬಾಕಿ ಬಿಲ್ ಬಿಡುಗಡೆಗೆ ಒತ್ತಾಯಿಸಿ ಮಾರ್ಚ್ 6ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಆಗಲೂ ಹಣ ಬಿಡುಗಡೆ ಮಾಡದಿದ್ದರೆ ಎಲ್ಲಾ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು. ಯಾವ ಇಲಾಖೆಯಲ್ಲಿ ಎಷ್ಟು ಪರ್ಸೆಂಟೇಜ್ ಕೇಳುತ್ತಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.

