ಬೆಂಗಳೂರು: ಸಭಾಪತಿ ಸ್ಥಾನಕ್ಕೆ ನಾನು ರಾಜೀನಾಮೆ ಕೊಡುವುದಿಲ್ಲ, ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಸದನದಲ್ಲಿ ಚರ್ಚೆ ಮಾಡಲಿ, ನನ್ನನ್ನು ಸಭಾಪತಿ ಸ್ಥಾನದಿಂದ ಇಳಿಸಲು ಕಾರಣವೇನು ಎಂಬುದು ಜನಕ್ಕೆ ಗೊತ್ತಾಗಲಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ಅದರದೇ ಆದ ಗೌರವ ಇದೆ. ಮೊದಲೆಲ್ಲ ಸಭಾಪತಿ ಆಯ್ಕೆಗೆ ಅದರ ನಿಯಮಗಳಿದ್ದವು, ಒಂದು ಪಕ್ಷದ ಹೈಕಮಾಂಡ್ ಪಕ್ಷದ ಲೆಟರ್ ಹೆಡ್ ನಲ್ಲಿ ಸಭಾಪತಿ ಮತ್ತು ಉಪ ಸಭಾಪತಿ ಹೆಸರುಗಳನ್ನು ಆಯ್ಕೆ ಮಾಡಿ ಕಳುಹಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲು ನೈತಿಕತೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದರು. ಈಗ ದುಡ್ಡಿದ್ದವರು ಮಾತ್ರ ಆಯ್ಕೆಯಾಗಿ ಬರುತ್ತಿದ್ದಾರೆ. ಸ್ಪೀಕರ್ ಮತ್ತು ಸಭಾಪತಿ ಆಯ್ಕೆ ಮಾಡುವ ಅವಕಾಶ ಸದನಕ್ಕೆ ಮಾತ್ರ ಇರುತ್ತದೆ. ಸದನದ ಸಾರ್ವಭೌಮತ್ವಕ್ಕೆ ತಿಲಾಂಜಲಿ ಇಟ್ಟ ರೀತಿ ಈ ಸರ್ಕಾರ ವರ್ತನೆ ಮಾಡಿದೆ. ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿ ತೆಗೆದ ಉದಾಹರಣೆಗಳಿಲ್ಲ. ನನಗೆ ಇದುವರೆಗೂ ಸರ್ಕಾರದಿಂದ ಯಾರೂ ಕರೆ ಮಾಡಿ ವಿಚಾರ ಹೇಳಿಲ್ಲ. ನನ್ನನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಬೇಸರ ತಂದಿದೆ ಎಂದು ಹೇಳಿದ್ದಾರೆ.
ನನ್ನನ್ನು ಕೇಳದೆ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿ ಘೋಷಣೆ ಮಾಡಿರುವುದು ಸದನಕ್ಕೆ ಶೋಭೆ ತರುವುದಿಲ್ಲ. ನಾನು ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇರುವ ವ್ಯಕ್ತಿ. 46 ವರ್ಷಗಳ ಕಾಲ ನಿರಂತರವಾಗಿ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಇದು ದಾಖಲೆ ಕೂಡ ಹೌದು, ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ವ್ಯಕ್ತಿ ನಾನು. ಈಗ ಕಾರಣವಿಲ್ಲದೆ ಸಭಾಪತಿ ಸ್ಥಾನದಿಂದ ಇಳಿಸಲು ಮುಂದಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಗೆ ಸಂಖ್ಯಾ ಬಲ ಇರಬಹುದು. ಆದರೆ ನನ್ನ ಅವಧಿ ಇನ್ನೂ ಮುಗಿದಿಲ್ಲ. ಕೇವಲ ಅಧಿಕಾರ ಮತ್ತು ರಾಜಕಾರಣದ ಕಾರಣಕ್ಕಾಗಿ ನನ್ನನ್ನು ಪದಚ್ಯುತಗೊಳಿಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ನಾನು ಏನೋ ತಪ್ಪು ಮಾಡಿ ಸ್ಥಾನ ಕಳೆದುಕೊಂಡೆ ಎಂಬ ಭಾವನೆ ಜನರಲ್ಲಿ ಮೂಡುವುದಿಲ್ಲವೇ? ಹೀಗಾಗಿ ಬಿಜೆಪಿ ನಾಯಕರ ಜೊತೆಗೂ ಮಾತನಾಡಿದ್ದೇನೆ. ಅವರು ರಾಜೀನಾಮೆ ಕೊಡುವುದು ಬೇಡವೆಂದು ಸಲಹೆ ನೀಡಿದ್ದಾರೆ. ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿ. ನನ್ನ ಪದಚ್ಯತಿ ಬಗ್ಗೆ ಚರ್ಚೆಯಾಗಲಿ. ಏಕೆ ನನ್ನನ್ನು ಸಭಾಪತಿ ಸ್ಥಾನದಿಂದ ಇಳಿಸುತ್ತಿದ್ದಾರೆ ಎಂಬ ಬಗ್ಗೆ ಚರ್ಚೆಯಲ್ಲಿ ಹೇಳಲಿ. ಸಾರ್ವಜನಿಕರಿಗೂ ಇದು ಗೊತ್ತಾಗಲಿ. ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಆದ ನಂತರ ನಾನು ರಾಜೀನಾಮೆ ನೀಡುತ್ತೇನೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

