ಬಾಯ್‌ಫ್ರೆಂಡ್ ಜೊತೆಗಿದ್ದಾಗ ಅನಿರೀಕ್ಷಿತವಾಗಿ ಬಂದ ತಂದೆಗೆ ಹೆದರಿ, ಫ್ಲಾಟ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ 22 ವರ್ಷದ ಯುವತಿಯೊಬ್ಬಳು ಎಂಟನೇ ಮಹಡಿಯಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ಬಳಿಯ ಕೊಲ್ಲೂರು ಎಂಬಲ್ಲಿ ನಡೆದಿದೆ. ಸಕೀನಾ ಬೇಗಂ ಎಂಬಾಕೆಯೇ ಮೃತ ದುರ್ದೈವಿ.
ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದೇನು? ಸಕೀನಾ ತನ್ನ ಗೆಳೆಯ ಆಲಿ ಜೊತೆಗೆ ತೆಲ್ಲಾಪುರ ವ್ಯಾಪ್ತಿಯಲ್ಲಿರುವ ತನ್ನ ತಂದೆಗೆ ಸೇರಿದ ಫ್ಲಾಟ್‌ಗೆ ಬಂದಿದ್ದಳು. ಈ ಫ್ಲಾಟ್ ಖಾಲಿಯಾಗಿದ್ದರಿಂದ ಇಬ್ಬರೂ ಅಲ್ಲಿ ಸಮಯ ಕಳೆಯುತ್ತಿದ್ದರು. ಆದರೆ, ಅದೇ ಸಮಯಕ್ಕೆ ಸಕೀನಾ ತಂದೆ ಪಡಿತರ ಅಕ್ಕಿ ಖರೀದಿಸಲು ಅದೇ ಪ್ರದೇಶಕ್ಕೆ ಬಂದಿದ್ದು, ವಿಶ್ರಾಂತಿ ಪಡೆಯಲೆಂದು ಈ ಫ್ಲಾಟ್‌ಗೆ ಬಂದಿದ್ದಾರೆ. ಹೊರಗಿನಿಂದ ಲಾಕ್ ಮಾಡಿದ್ದರೂ ಒಳಗಿನಿಂದ ಶಬ್ದ ಕೇಳಿಬಂದಾಗ ಅನುಮಾನಗೊಂಡ ತಂದೆ ಬಾಗಿಲು ತಟ್ಟಿದ್ದಾರೆ.
ಎಂಟನೇ ಮಹಡಿಯಿಂದ ಇಳಿಯುವ ಸಾಹಸ ಬಾಗಿಲಲ್ಲಿರುವುದು ತಂದೆ ಎಂದು ತಿಳಿಯುತ್ತಿದ್ದಂತೆಯೇ ಸಕೀನಾ ಮತ್ತು ಆಲಿ ಗಾಬರಿಗೊಂಡಿದ್ದಾರೆ. ತಂದೆಯ ಕಣ್ಣಿಗೆ ಬೀಳಬಾರದೆಂಬ ಆತುರದಲ್ಲಿ ಇಬ್ಬರೂ ಎಂಟನೇ ಮಹಡಿಯ ಬಾಲ್ಕನಿಯಿಂದ ಏಳನೇ ಮಹಡಿಗೆ ಇಳಿಯಲು ನಿರ್ಧರಿಸಿದ್ದಾರೆ. ಸಕೀನಾ ಕೆಳಗೆ ಇಳಿಯುವಾಗ ಆಲಿ ಆಕೆಯ ಕೈ ಹಿಡಿದುಕೊಂಡಿದ್ದನು. ಆದರೆ, ದುರದೃಷ್ಟವಶಾತ್ ಆಕೆಯ ಹಿಡಿತ ತಪ್ಪಿ ನೇರವಾಗಿ ಕೆಳಗೆ ಬಿದ್ದಿದ್ದಾಳೆ. ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಪೊಲೀಸ್ ತನಿಖೆ ಮತ್ತು ಕೇಸ್ ದಾಖಲು ಮಾಹಿತಿ ತಿಳಿದ ಕೊಲ್ಲೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗೆಳತಿಯನ್ನು ರಕ್ಷಿಸಲು ವಿಫಲನಾದ ಮತ್ತು ಆಕೆಯನ್ನು ಈ ಸಾಹಸಕ್ಕೆ ಪ್ರೇರೇಪಿಸಿದ ಆರೋಪದ ಮೇಲೆ ಆಲಿ ವಿರುದ್ಧ ಕೊಲೆಗೆ ಸಮನಲ್ಲದ ಅಪರಾಧದ ಮಾನವ ಹತ್ಯೆ (Culpable homicide not amounting to murder) ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

