ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜಗತ್ತಿನಾದ್ಯಂತ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಇರಾನ್ ‘ಹಾರ್ಮುಜ್ ಜಲಸಂಧಿ’ಯನ್ನು ಮುಚ್ಚಿರುವುದರಿಂದ ತೈಲ ಪೂರೈಕೆ ವಿಳಂಬವಾಗುತ್ತಿದೆ.
ಈ ನಡುವೆ, ದೇಶಾದ್ಯಂತ ಎಲ್‌ಪಿಜಿ ಪೂರೈಕೆಗೆ ಯಾವುದೇ ಅಡ್ಡಿಯಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅನಿಲ ಸರಬರಾಜು ಸುಗಮವಾಗಿ ನಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಸದ್ಯಕ್ಕೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಜಿಟಲ್ ವಹಿವಾಟಿನ ಭಾಗವಾಗಿ ಆನ್‌ಲೈನ್ ಗ್ಯಾಸ್ ಬುಕಿಂಗ್ ಪ್ರಮಾಣ ಶೇ. 99ಕ್ಕೆ ತಲುಪಿದ್ದರೆ, ಒಟಿಪಿ (OTP) ಆಧಾರಿತ ವಿತರಣೆಯು ಶೇ. 94.5 ರಷ್ಟಿದೆ. ದೇಶಾದ್ಯಂತ ಪಿಎನ್‌ಜಿ (PNG) ಸಂಪರ್ಕಗಳ ಸಂಖ್ಯೆ ಸುಮಾರು 8 ಲಕ್ಷಕ್ಕೆ ಏರಿಕೆಯಾಗಿದೆ. ಪ್ರಸ್ತುತ ದೇಶದ ಯಾವುದೇ ವಿತರಣಾ ಕೇಂದ್ರಗಳಲ್ಲಿ ಪೂರೈಕೆ ಸ್ಥಗಿತಗೊಂಡಿಲ್ಲ ಎಂದು ಸರ್ಕಾರ ಹೇಳಿದೆ.
ಮೇ 1 ರಿಂದ ಜಾರಿಗೆ ಬರಲಿರುವ ಬದಲಾವಣೆಗಳು:
- ಬೆಲೆ ಬದಲಾವಣೆ: ಮೇ 1, 2026 ರಿಂದ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
- ಬುಕಿಂಗ್ ಅಂತರ: ಎರಡು ಸಿಲಿಂಡರ್ ಬುಕಿಂಗ್‌ಗಳ ನಡುವೆ ಕನಿಷ್ಠ 25 ದಿನಗಳ ಅಂತರ ಕಡ್ಡಾಯಗೊಳಿಸುವ ಸಾಧ್ಯತೆಯಿದೆ.
- ಖಾಯಂ ಒಟಿಪಿ ನಿಯಮ: ಒಟಿಪಿ ಆಧಾರಿತ ವಿತರಣಾ ವ್ಯವಸ್ಥೆಯನ್ನು ಇನ್ಮುಂದೆ ಕಾಯಂ ಮಾಡಲಾಗುವುದು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನೀಡಿದ ನಂತರವಷ್ಟೇ ಸಿಲಿಂಡರ್ ವಿತರಿಸಲಾಗುವುದು.
- ಹೊಸ ಸಂಪರ್ಕ ಸ್ಥಗಿತ: ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಗ್ಯಾಸ್ ಸಂಪರ್ಕ ನೀಡುವುದನ್ನು ತಾತ್ಕಾಲಿಕವಾಗಿ ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪರಿಸ್ಥಿತಿ ಸುಧಾರಿಸಿದ ನಂತರ ಈ ನಿರ್ಧಾರವನ್ನು ಹಿಂಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಭಾರತಕ್ಕೆ ಪ್ರತಿದಿನ 80 ಸಾವಿರ ಟನ್ ಎಲ್‌ಪಿಜಿ(LPG) ಅಗತ್ಯವಿದ್ದು, ದೇಶೀಯ ಉತ್ಪಾದನೆಯು 46 ಸಾವಿರ ಟನ್ ಮಾತ್ರ ಇದೆ. ಈ ಕೊರತೆಯನ್ನು ನೀಗಿಸಲು ಅಮೆರಿಕಾದಿಂದ ಎಲ್‌ಪಿಜಿ ಆಮದು ಮಾಡಿಕೊಳ್ಳಲಾಗುತ್ತಿದೆ.

