ಹುಬ್ಬಳ್ಳಿ: ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಸಾಲು ಸಾಲು ಬೆಂಕಿ ಅವಘಡ ಪ್ರಕರಣಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಪರ್ಫ್ಯೂಮ್ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿ, ಇಬ್ಬರು ಕೂಲಿ ಕಾರ್ಮಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆನ್ನಲ್ಲೇ ಅತ್ತ ಹುಬ್ಬಳ್ಳಿಯಲ್ಲಿಯೂ ಬೆಂಕಿ ಅವಘಡ ಸಂಭವಿಸಿದೆ.
ಹುಬ್ಬಳ್ಳಿಯಲ್ಲಿ ಎಲೆಕ್ಟ್ರಾನಿಕ್ ಗೋಡೌನ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ನೋಡ ನೋಡುತ್ತಿದ್ದಂತೆಯೇ ಗೋಡೌನ್ ಹೊತ್ತಿ ಉರಿದಿದೆ. ಹುಬ್ಬಳ್ಳಿಯ ಕುಸಗಲ್ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ಗೋದಾಮಿನಲ್ಲಿ ಈ ಘಟನೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಯಾವುದೇ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

