HomeKarnatakaನಿನ್ನ ಮಕ್ಕಳಾಗಿದ್ರೆ ಶೆಡ್ ನಲ್ಲೇ ಮಲಗಿಸ್ತಿದ್ಯಾ? ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಶಿವಲಿಂಗೇಗೌಡ

ನಿನ್ನ ಮಕ್ಕಳಾಗಿದ್ರೆ ಶೆಡ್ ನಲ್ಲೇ ಮಲಗಿಸ್ತಿದ್ಯಾ? ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವ ಶಿವಲಿಂಗೇಗೌಡ

ಹಾಸನ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಒಳಪಡುವ ಅಂಬೇಡ್ಕರ್ ವಸತಿ ಶಾಲೆಯೊಂದನ್ನು ಎರಡು ಶೆಡ್ ಗಳಲ್ಲಿ ನಡೆಸುತ್ತಿದ್ದು, ಮಕ್ಕಳು ಅದೇ ಶೆಡ್ ನಲ್ಲಿ ವಾಸವಾಗುತ್ತಿರುವ ಘಟನೆ ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿ ನಡೆದಿದೆ.

ಕಳೆದ ಐದು ವರ್ಷಗಳಿಂದ ಇದೇ ಶೆಡ್ ನಲ್ಲಿ 172 ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಈ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಂತಿಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಅವ್ಯವಸ್ಥೆ ಕುರಿತು ಸಚಿವ ಶಿವಲಿಂಗೇಗೌಡ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಮಕ್ಕಳನ್ನು ಶೆಡ್ ಗಳಲ್ಲಿ ಇರಿಸಿದ್ಯಾಕೆ? ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ದೂದ್‌ಪೀರ್, ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ನಡೆಯುತ್ತಿದ್ದು, ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಸ್ಥಳಾವಕಾಶದ ಸಮಸ್ಯೆ ಇದೆ ಎಂದು ತಿಳಿಸಿದರು. ಇದಕ್ಕೆ ಸಿಡಿಮಿಡಿಗೊಂಡ ಸಚಿವರು, ಸ್ಥಳಾವಕಾಶ ಕಡಿಮೆ ಇದೆ ಅಂದ್ರೆ, ಕೂಡಿ ಹಾಕಲು ಅವರೇನು ಕುರಿಗಳಾ, ದನಗಳಾ? ನಿನ್ನ ಮಕ್ಕಳಾಗಿದ್ರೆ ಇದೇ ರೀತಿ ಶೆಡ್ ನಲ್ಲಿ ಮಲಗಿಸ್ತಿದ್ಯಾ? ಅಂತಾ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಅಧಿಕಾರಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಸ್ಥಳಾಂತರದ ಪ್ರಯತ್ನ ನಡೆಯುತ್ತಿದೆ ಎಂದು ಸಮಜಾಯಿಷಿ ನೀಡಿದರು. ಮತ್ತೆ ಗರಂ ಆದ ಸಚಿವರು, ನೀನು ಪ್ರಯತ್ನ ಮಾಡುತ್ತಲೇ ಇರು ಎಂದು ಗುಡುಗಿದರು.

ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೆ ಮಕ್ಕಳನ್ನ ಬೇರೆ ಸುರಕ್ಷಿತ ಕಟ್ಟಡಕ್ಕೆ ತಕ್ಷಣ ಸ್ಥಳಾಂತರಿಸುವಂತೆ ಸೂಚನೆ ನೀಡಿದರು. ಹೊಸ ಕಟ್ಟಡ ಹುಡುಕಿ ಮಕ್ಕಳನ್ನ ಅಲ್ಲಿಗೆ ಶಿಫ್ಟ್ ಮಾಡಿ. ನಾನು ಮತ್ತೆ ವಿಸಿಟ್ ಮಾಡುವುದರೊಳಗೆ ಹಾಸ್ಟೆಲ್ ಸ್ಥಳಾಂತರವಾಗಿರಬೇಕು. ಇಲ್ಲವಾದ್ರೆ ನಾನು ಸುಮ್ಮನಿರಲ್ಲ ಎಂದು ಎಚ್ಚರಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ, ಘಣಘಟ್ಟದಲ್ಲಿ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಸುಮಾರು 60% ಕಾಮಗಾರಿ ಪೂರ್ಣಗೊಂಡಿದೆ. 4 ತಿಂಗಳಲ್ಲಿ ಕಟ್ಟಡ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೊಸ ಕಟ್ಟಡದಲ್ಲಿ ಮಕ್ಕಳಿಗೆ ಹಾಸಿಗೆ ಹಾಗೂ ಮಂಚಗಳನ್ನ ಹಾಕಲು ಸೂಕ್ತ ಜಾಗವಿಲ್ಲದಿರುವುದರಿಂದ ಪ್ರಸ್ತುತ ಹಾಸ್ಟೆಲ್‌ನಲ್ಲಿ ತೀವ್ರ ಅನಾನುಕೂಲತೆ ಉಂಟಾಗಿದೆ ಎಂದು ಸಚಿವರಿಗೆ ಉತ್ತರ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುತ್ತಿಗೆದಾರರು 1 ವರ್ಷ ಎಂದರೆ 3 ವರ್ಷ ಮಾಡ್ತಾರೆ. ಅವರು ಸರಿಯಿಲ್ಲ, ಕಟ್ಟಡವೂ ಸರಿಯಿಲ್ಲ. ನಾನು ತಾವು ಮುಂದಿನ ಬಾರಿ ಭೇಟಿ ನೀಡುವ ವೇಳೆಗೆ ಮಕ್ಕಳು ಹಳೆಯ ಕಟ್ಟಡದಲ್ಲಿರಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಹಾಸನ ತಾಲ್ಲೂಕಿನ ಶಾಂತಿಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಸುಮಾರು 172 ಬಡ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ 92 ಬಾಲಕರು ಮತ್ತು 80 ಬಾಲಕಿಯರು ಇದ್ದಾರೆ. ಕಳೆದ 5 ವರ್ಷಗಳಿಂದ ಶೆಡ್‌ನಂತಿರುವ ಬಾಡಿಗೆ ಕಟ್ಟಡದಲ್ಲೇ ಮಕ್ಕಳು ವಾಸಿಸುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಊಟ, ನಿದ್ರೆ ಹಾಗೂ ಪಾಠ ಕೇಳುವಂತಹ ದುರಾವಸ್ಥೆ ಇದ್ದು, ವಿದ್ಯಾರ್ಥಿಗಳು ನೆಲದಲ್ಲೇ ಕುಳಿತು ಪಾಠ ಕೇಳುವ ದುಸ್ಥಿತಿ ಇದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular