ಬಳ್ಳಾರಿ: ಸೈಬರ್ ವಂಚಕರು ಈಗ ವಯೋವೃದ್ಧರನ್ನೇ ಗುರಿಯಾಗಿಸಿಕೊಂಡು ಭಯಾನಕ ರೀತಿಯಲ್ಲಿ ವಂಚಿಸುತ್ತಿದ್ದಾರೆ. ಬಳ್ಳಾರಿಯ 94 ವರ್ಷದ ನಿವೃತ್ತ ಸಂಶೋಧಕರೊಬ್ಬರನ್ನು ‘ಡಿಜಿಟಲ್ಅರೆಸ್ಟ್’ ಹೆಸರಿನಲ್ಲಿ ಬೆದರಿಸಿದ ಸೈಬರ್ ಕಳ್ಳರು ಬರೋಬ್ಬರಿ 5 ಕೋಟಿ ರೂಪಾಯಿ ಹಣವನ್ನು ದೋಚಿದ್ದಾರೆ.
ವಂಚನೆ ನಡೆದಿದ್ದು ಹೇಗೆ..?
ವಂಚನೆಯ ಜಾಲವು ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು, ಹಂತ ಹಂತವಾಗಿ ವೃದ್ಧರನ್ನು ನಂಬಿಸಲಾಗಿದೆ
- ಟೆಲಿಕಾಂ ಅಧಿಕಾರಿಯ ಸೋಗು: ಮೊದಲು ವೃದ್ಧರ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಟೆಲಿಕಾಂ ಇಲಾಖೆಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. “ನಿಮ್ಮ ಹೆಸರಿನಲ್ಲಿ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಾಗಿದೆ” ಎಂದು ಹೆದರಿಸಿದ್ದಾನೆ.
- ನಕಲಿ ಸಿಬಿಐ ಅಧಿಕಾರಿ ಎಂಟ್ರಿ : ನಂತರ ‘ಸಂದೀಪ್ ರಾವ್’ ಎಂಬ ಹೆಸರಿನಲ್ಲಿ ಕರೆ ಮಾಡಿದ ಮತ್ತೊಬ್ಬ ವ್ಯಕ್ತಿ, ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ವೃದ್ಧರ ಆಧಾರ್ ಕಾರ್ಡ್ ವಿವರಗಳನ್ನು ವಾಟ್ಸಾಪ್ ಮೂಲಕ ಪಡೆದುಕೊಂಡಿದ್ದಾನೆ.
- ನಕಲಿ ಎಫ್‌ಐಆರ್ ಸೃಷ್ಟಿ : ವೃದ್ಧರ ಮೊಬೈಲ್ ನಂಬರ್‌ಗೆ ನಕಲಿ ಎಫ್‌ಐಆರ್ ಪ್ರತಿಯನ್ನು ಕಳುಹಿಸಿ, ಅವರು ದೊಡ್ಡ ಕ್ರಿಮಿನಲ್ ಕೇಸ್‌ನಲ್ಲಿ ಸಿಲುಕಿದ್ದಾರೆ ಎಂಬ ಭಯ ಹುಟ್ಟಿಸಿದ್ದಾರೆ.
- ವೀಡಿಯೋಕಾಲ್: ಪೊಲೀಸರ ಸಮವಸ್ತ್ರ ಧರಿಸಿದ್ದ ಆರೋಪಿಗಳು ವೀಡಿಯೋ ಕಾಲ್ ಮಾಡಿ, ವೃದ್ಧರನ್ನು ಮನೆಯಲ್ಲೇ ‘ಡಿಜಿಟಲ್ ಅರೆಸ್ಟ್’ ಮಾಡಿದ್ದಾರೆ. “ನಾವು ಹೇಳಿದಂತೆ ಕೇಳದಿದ್ದರೆ ಜೈಲಿಗೆ ಹಾಕುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ.
- ಹಣಕ್ಕಾಗಿ ಬೇಡಿಕೆ : ಪ್ರಕರಣದಿಂದ ಬಿಡುಗಡೆ ಮಾಡಬೇಕಾದರೆ ಹಣ ನೀಡಬೇಕು ಎಂದು ನಂಬಿಸಿ, ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 4,91,62,000 ರೂಪಾಯಿ ವರ್ಗಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ತನಿಖೆ
ತಾನು ಮೋಸ ಹೋಗಿರುವುದು ತಡವಾಗಿ ಬೆಳಕಿಗೆ ಬಂದ ಕೂಡಲೇ ವೃದ್ಧರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಬಳ್ಳಾರಿಯ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸಾರ್ವಜನಿಕರಿಗೆ ಎಚ್ಚರಿಕೆ : ಯಾವುದೇ ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳು ವೀಡಿಯೋ ಕಾಲ್ ಮೂಲಕ ಹಣಕ್ಕೆ ಬೇಡಿಕೆ ಇಡುವುದಿಲ್ಲ ಅಥವಾ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ. ಇಂತಹ ಕರೆಗಳು ಬಂದರೆ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.

