ಬಾಗಲಕೋಟೆ ಉಪ ಚುನಾವಣೆ ಕಣ ಅಂತಿಮವಾಗಿದೆ. ಎಚ್.ವೈ.ಮೇಟಿ ನಿಧನದ ಕಾರಣ ಉಪ ಚುನಾವಣೆ ಎದುರಾಗಿದ್ದು, ಏಪ್ರಿಲ್ 9ರಂದು ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ವೀರಣ್ಣ ಚರಂತಿಮಠ ಮತ್ತು ಕಾಂಗ್ರೆಸ್‌ನಿಂದ ಎಚ್.ವೈ.ಮೇಟಿ ಪುತ್ರ ಉಮೇಶ್ ಮೇಟಿ ಅಭ್ಯರ್ಥಿಗಳು.
ಬಾಗಲಕೋಟೆ ಚುನಾವಣೆ ಎಂದರೆ ಅದು ವೀರಣ್ಣ ಚರಂತಿಮಠ ಮತ್ತು ಎಚ್.ವೈ.ಮೇಟಿ ನಡುವಿನ ಹೋರಾಟ. 2023ರಲ್ಲಿ ವೀರಣ್ಣ ಚರಂತಿಮಠ ಎಚ್.ವೈ.ಮೇಟಿ ವಿರುದ್ಧ ಸೋತಿದ್ದರು. ಈಗ ಉಪ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಜಯದ ದೃಢಸಂಕಲ್ಪದೊಂದಿಗೆ ಬಾಗಲಕೋಟೆ ಉಪಚುನಾವಣೆಯ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಅಧಿಕೃತವಾಗಿ ಪಕ್ಷದ ಬಿ-ಫಾರಂ ನೀಡಿದ್ದಾರೆ. ಸೋಮವಾರ ಅವರು ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
ಬಾಗಲಕೋಟೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಪಕ್ಷದ ತತ್ವ, ಸಿದ್ಧಾಂತ ಹಾಗೂ ಅಭಿವೃದ್ಧಿ-ಪರ ರಾಜಕಾರಣವನ್ನು ಮೆಚ್ಚಿ ಕ್ಷೇತ್ರದ ವಿವಿಧ ಪಕ್ಷಗಳ ಪ್ರಮುಖರು, ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಿ.ವೈ.ವಿಜಯೇಂದ್ರ ಅವರು ನಮ್ಮ ಕಾರ್ಯಕರ್ತರ ಪರಿಶ್ರಮ ಮತ್ತು ಕ್ಷೇತ್ರದ ಜನತೆಯ ಆಶೀರ್ವಾದದೊಂದಿಗೆ ಬಾಗಲಕೋಟೆಯಲ್ಲಿ ಈ ಬಾರಿ ನಮ್ಮ ಪಕ್ಷದ ವಿಜಯಪತಾಕೆ ಹಾರುವುದು ನಿಶ್ಚಿತ ಎಂದು ಹೇಳಿದ್ದಾರೆ.
ವಿಜಯೇಂದ್ರ ಅವರು ಬಾಗಲಕೋಟೆಯಲ್ಲಿ ಉಪಚುನಾವಣಾ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಾಗಲಕೋಟೆ ಉಪಚುನಾವಣಾ ಅಭ್ಯರ್ಥಿ ವೀರಣ್ಣ ಚರಂತಿಮಠ ಮುಂತಾದವರು ಉಪಸ್ಥಿತರಿದ್ದರು.

