ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಹಾಂಕಾಂಗ್ ವಿರುದ್ಧ 137 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಪಾರಮ್ಯ ಮೆರೆದಿದೆ. ಮೈದಾನದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತೀಯ ಆಟಗಾರ್ತಿಯರು, ಪಂದ್ಯ ಮುಗಿದ ಬಳಿಕ ತಮ್ಮ ಸೌಜನ್ಯದ ನಡೆ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಪಂದ್ಯದ ನಂತರ ಹಾಂಕಾಂಗ್ ತಂಡದ ಆಟಗಾರ್ತಿಯರಿಗೆ ಭಾರತದ ಡ್ರೆಸ್ಸಿಂಗ್ ರೂಮ್‌ಗೆ ವಿಶೇಷ ಆಹ್ವಾನ ನೀಡಲಾಗಿತ್ತು. ಮೈದಾನದಲ್ಲೇ ಸ್ಮೃತಿ ಮಂಧನಾ ಹಾಂಕಾಂಗ್ ಕ್ರೀಡಾಪಟುಗಳಿಗೆ ಆಟದ ಕುರಿತು ಪ್ರೇರಣಾದಾಯಿಕ ಮಾತುಗಳನ್ನಾಡಿ ಧೈರ್ಯ ತುಂಬಿದರು. ಇದಾದ ಬಳಿಕ ಭಾರತದ ಆಟಗಾರರನ್ನು ಭೇಟಿಯಾದ ಹಾಂಕಾಂಗ್ ಆಟಗಾರ್ತಿಯರು, ಕ್ರಿಕೆಟ್ ತಂತ್ರಗಳು ಹಾಗೂ ಅನುಭವಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.
ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ಹಾಂಕಾಂಗ್ ಆಟಗಾರ್ತಿಯರಿಗೆ ಅತ್ಯಂತ ತಾಳ್ಮೆಯಿಂದ ಆಟೋಗ್ರಾಫ್ ನೀಡಿ ಶುಭ ಹಾರೈಸಿದರು. ಇದೇ ವೇಳೆ ದೀಪ್ತಿ ಶರ್ಮಾ, ರಿಚಾ ಘೋಷ್, ಭಾರತಿ ಫುಲ್ಮಾಲಿ ಮತ್ತು ಪ್ರತಿಕಾ ರಾವಲ್ ಅವರೊಂದಿಗೆ ಹಾಂಕಾಂಗ್ ಆಟಗಾರ್ತಿಯರು ಉತ್ಸಾಹದಿಂದ ಸಂವಾದ ನಡೆಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಭಾರತ ತಂಡವನ್ನು ಮೊದಲ ಬಾರಿಗೆ ಎದುರಿಸಿದ ಹಾಂಕಾಂಗ್‌ಗೆ ಈ ಪಂದ್ಯ ಹಾಗೂ ಹಿರಿಯ ಆಟಗಾರ್ತಿಯರ ಭೇಟಿ ಒಂದು ಅದ್ಭುತ ಕಲಿಕೆಯ ಅನುಭವವಾಗಿ ಹೊರಹೊಮ್ಮಿದೆ. ಭಾನುವಾರ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಈ ಗೆಲುವು ದೊಡ್ಡ ಮಟ್ಟದ ಆತ್ಮವಿಶ್ವಾಸ ತಂದುಕೊಟ್ಟಿದೆ.
“>

