ಚಂಡೀಗಢ: ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಕಾರಣ 19 ವರ್ಷದ ತುಂಬು ಯೌವನದ ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಂಡೀಗಢದ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಖಾಸಗಿ ಆಸ್ಪತ್ರೆ ಮತ್ತು ವೈದ್ಯರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಮೃತ ಯುವತಿಯ ತಾಯಿಗೆ ಬರೊಬ್ಬರಿ 70.40 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮೊಹಾಲಿಯ ಐವಿ ಆಸ್ಪತ್ರೆ ಹಾಗೂ ಅದರ ಮೂವರು ವೈದ್ಯರಿಗೆ ಕೋರ್ಟ್ ಆದೇಶಿಸಿದೆ.
ಏನಿದು ಘಟನೆ? 2021ರ ಡಿಸೆಂಬರ್‌ನಲ್ಲಿ 12ನೇ ತರಗತಿಯಲ್ಲಿ ಶೇ. 91.2ರಷ್ಟು ಅಂಕ ಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಗುರ್ಪ್ರೀತ್ ಕೌರ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಡೆಂಗ್ಯೂ ಲಕ್ಷಣಗಳಿದ್ದರೂ ಆಸ್ಪತ್ರೆಯು ರಕ್ತ ಪರೀಕ್ಷೆ ಮತ್ತು ಚಿಕಿತ್ಸೆ ನೀಡುವಲ್ಲಿ ತೀವ್ರ ವಿಳಂಬ ಮಾಡಿತ್ತು. ಈ ನಿರ್ಲಕ್ಷ್ಯದಿಂದಾಗಿ ಗುರ್ಪ್ರೀತ್ ಕೌರ್ ‘ಡೆಂಗ್ಯೂ ಶಾಕ್ ಸಿಂಡ್ರೋಮ್’ನಿಂದ ಮೃತಪಟ್ಟಿದ್ದರು. ಈ ಹಿಂದೆ ಜಿಲ್ಲಾ ಗ್ರಾಹಕ ನ್ಯಾಯಾಲಯವು ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿತ್ತು, ಇದನ್ನು ಪ್ರಶ್ನಿಸಿ ತಾಯಿ ಕವಿತಾ ಅವರು ರಾಜ್ಯ ಆಯೋಗದ ಮೆಟ್ಟಿಲೇರಿದ್ದರು.
ನ್ಯಾಯಾಲಯದ ಭಾವುಕ ಅವಲೋಕನ: ಪ್ರಕರಣದ ವಿಚಾರಣೆ ನಡೆಸಿದ ಪದ್ಮಾ ಪಾಂಡೆ ಮತ್ತು ರಾಜೇಶ್ ಕೆ. ಆರ್ಯ ಅವರಿದ್ದ ಪೀಠವು ಅತ್ಯಂತ ಕಠಿಣ ಹಾಗೂ ಭಾವುಕ ಮಾತುಗಳಲ್ಲಿ ಆಸ್ಪತ್ರೆಯನ್ನು ತರಾಟೆಗೆ ತೆಗೆದುಕೊಂಡಿತು. “19 ವರ್ಷದ ಮಗಳ ಸಾವು ಕೇವಲ ಒಬ್ಬ ರೋಗಿಯ ಸಾವಲ್ಲ, ಅದು ಒಂದು ಕುಟುಂಬದ ಕನಸು ಮತ್ತು ಭವಿಷ್ಯದ ಅಂತ್ಯ. ಒಮ್ಮೆ ಯೌವನದ ಉತ್ಸಾಹದಿಂದ ತುಂಬಿದ್ದ ಮನೆ ಇಂದು ಮೌನವಾಗಿದೆ. ಈ ಮೌನವನ್ನು ಮತ್ತು ತಾಯಿಯ ಹೃದಯದಲ್ಲಿರುವ ಶೂನ್ಯವನ್ನು ಯಾವುದೇ ಹಣದಿಂದ ತುಂಬಲು ಸಾಧ್ಯವಿಲ್ಲ. ಆದರೂ ಕಾನೂನು ವ್ಯವಸ್ಥೆಯಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಲು ಆರ್ಥಿಕ ಪರಿಹಾರವೇ ಏಕೈಕ ದಾರಿ” ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.
ಹೊಣೆಗಾರಿಕೆ ನಿಗದಿ: ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಡೆಂಗ್ಯೂ ಅನುಮಾನ ಬಂದ ತಕ್ಷಣ ಪರೀಕ್ಷೆ ನಡೆಸಿ ಚಿಕಿತ್ಸೆ ಆರಂಭಿಸಬೇಕು. ಆದರೆ ಇಲ್ಲಿ ವೈದ್ಯರು ಸೂಚನೆ ನೀಡಿದರೂ ಮಾದರಿ ಸಂಗ್ರಹ ಮತ್ತು ವರದಿ ನೀಡುವಲ್ಲಿ ಅನಗತ್ಯ ವಿಳಂಬವಾಗಿದೆ ಎಂದು ಕೋರ್ಟ್ ಪತ್ತೆಹಚ್ಚಿದೆ. ಐವಿ ಆಸ್ಪತ್ರೆಗೆ 10 ಲಕ್ಷ ರೂ., ಒಬ್ಬ ವೈದ್ಯರಿಗೆ 10 ಲಕ್ಷ ರೂ. ಹಾಗೂ ಇಬ್ಬರು ವೈದ್ಯರಿಗೆ ತಲಾ 25 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಲ್ಲದೆ 40,000 ರೂಪಾಯಿ ಕಾನೂನು ವೆಚ್ಚವನ್ನೂ ನೀಡುವಂತೆ ಆದೇಶಿಸಲಾಗಿದೆ. ವೈದ್ಯಕೀಯ ಸಂಸ್ಥೆಗಳು ರೋಗಿಗಳ ಜೀವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂಬುದಕ್ಕೆ ಈ ತೀರ್ಪು ಒಂದು ಎಚ್ಚರಿಕೆಯ ಗಂಟೆಯಾಗಿದೆ.

