ಭಾರತದಲ್ಲಿ ಈ ಹಿಂದಿನಿಂದಲೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಡುವೆ ಅಂತರವನ್ನು ಸೃಷ್ಟಿಸಿರುವುದು ಭಾಷೆಯ ವಿಷಯ. ದಕ್ಷಿಣ ಭಾರತದ ರಾಜ್ಯಗಳ ನಡುವೆ ಎಷ್ಟೇ ವೈಮನಸ್ಸಿದ್ದರೂ ಭಾಷೆಯ ವಿಷಯ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ವಿರುದ್ಧ ಎಲ್ಲ ನಾಲ್ಕು ರಾಜ್ಯಗಳ ಜನರು ಒಂದಾಗುವುದನ್ನು ನಾವು ಕಂಡಿದ್ದೇವೆ.
ಅನೇಕ ಬಾರಿ ಎಕ್ಸ್‌ನಲ್ಲಿ ‘ಹಿಂದಿ ಹೇರಿಕೆ ನಿಲ್ಲಿಸಿ’ ( Stop Hindi Imposition ) ಟ್ರೆಂಡ್ ಸದ್ದು ಮಾಡಿದೆ. ಅನೇಕ ಬ್ಯಾಂಕ್ ಮತ್ತು ಇನ್ನಿತರ ಸಂಸ್ಥೆ, ಹೋಟೆಲ್ ಹಾಗೂ ಅಂಗಡಿಗಳಲ್ಲಿ ಹಿಂದಿ ಮಾತನಾಡಿದ್ದರ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.
ಇಷ್ಟರ ಮಟ್ಟಿಗೆ ಗಂಭೀರ ವಿಷಯವಾಗಿರುವ ಹಿಂದಿ ಹೇರಿಕೆ ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಭಾರತ ತಂಡದಲ್ಲೂ ಸಹ ಇದೆ ಎಂದು ನೆಟ್ಟಿಗರು ವಿಡಿಯೊ ಹಂಚಿಕೊಂಡು ಆರೋಪಿಸಿದ್ದಾರೆ.
ಈ ವಿಡಿಯೊದಲ್ಲಿ ಟೀಮ್ ಇಂಡಿಯಾ ಆಟಗಾರರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದು, ಆ ಸಂದರ್ಭದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬೀದರ್ ಮೂಲಕ ಕ್ರಿಕೆಟಿಗ ವರುಣ್ ಚಕ್ರವರ್ತಿಗೆ ‘ಮಚ್ಚಿ ಕೇವಲ ಹಿಂದಿ ಮಾತ್ರ. ಏನೇ ಮಾತನಾಡುವುದಿದ್ದರೂ ಹಿಂದಿಯಲ್ಲಿ ಮಾತನಾಡು’ ಎಂದು ಹೇಳಿದ್ದಾರೆ. ಇದಕ್ಕೆ ಸ್ಥಳದಲ್ಲೇ ವರುಣ್ ಚಕ್ರವರ್ತಿ ‘ನನಗೆ ಹಿಂದಿ ಗೊತ್ತಿಲ್ಲ’ ಎಂಬ ಉತ್ತರವನ್ನು ನೀಡಿದ್ದಾರೆ.
ಇಷ್ಟು ಸಂಭಾಷಣೆಯ ವಿಡಿಯೊ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಹಂಚಿಕೊಂಡಿರುವ ಕನ್ನಡ ಪ್ರೇಮಿಗಳು ಇದನ್ನೇ ಹಿಂದಿ ಹೇರಿಕೆ ಎನ್ನುವುದು ಎಂದು ಸೂರ್ಯಕುಮಾರ್ ಯಾದವ್ ವಿರುದ್ಧ ಕಿಡಿಕಾರಿದ್ದಾರೆ.

