ಬೆಳಗಾವಿ: ಕೈದಿಗಖ ನಡುವೆ ಗಕಟೆ ನಡೆದು, ಮಾಅರಾಮಾರಿ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಕೇಂದ್ರ ಕಾರಾಗೃಹ ಹಿಂಡಲಗಾ ಜೈಲಿನಲ್ಲಿ ನಡೆದಿದೆ.
ಇಬ್ಬರು ಕೈದಿಗಳ ನಡುವಿನ ಹೊಡೆದಾಟದಲ್ಲಿ ಓರ್ವ ಕೈದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಯ ಮುತ್ಯಾನಟ್ಟಿ ಮೂಲದ ಕೈದಿ ಸುರೇಶ್ ಹಲ್ಲೆಗೊಳಗಾದವನು.
ಜೈಲಿನಲ್ಲಿ ಇಬ್ಬರು ಕೈದಿಗಳ ನಡುವೆ ಜಗಳ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಕೈದಿಗಳಾದ ಸುರೇಶ್ ಹಾಗೂ ಫಯಾನ್ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಸುರೇಶ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಕೈದಿ ಸುರೇಶ್ ಬೆಳಗಾವಿ ಮೂಲದವನಾಗಿದ್ದರೆ, ಹಲ್ಲೆ ನಡೆಸಿರುವ ಕೈದಿ ಫಯಾನ್, ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಂಗಳೂರು ಮೂಲದವನು ಎಂದು ತಿಳಿದುಬಂದಿದೆ.
ಗಾಯಾಳು ಕೈದಿ ಸುರೇಶ್ ನನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

